‘ಮೇಕೆದಾಟು ಯೋಜನೆ’ ಶೀಘ್ರವೆ ಮುಖ್ಯಮಂತ್ರಿ ಜೊತೆ ಚರ್ಚೆ: ಎಚ್.ಡಿ.ಕುಮಾರಸ್ವಾಮಿ
ರಾಮನಗರ, ಆ.13: ಮೇಕೆದಾಟು ಯೋಜನೆ ವಿಚಾರದಲ್ಲಿ ಈಗಾಗಲೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ನಮ್ಮ ಪಕ್ಷ ಮಾಡಿದೆ. ಇನ್ನೊಂದು ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಯಾರ ಅಪ್ಪಣೆಯೂ ಬೇಕಿಲ್ಲ ಎಂದು ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರು ನೀಡಿರುವ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಹಾಗಿದ್ದರೆ, ಸಮಯ ವ್ಯರ್ಥ ಮಾಡೋದು ಬೇಡ. ಶೀಘ್ರವೆ ಕೆಲಸ ಪ್ರಾರಂಭಿಸಬೇಕು ಎಂದರು.
ನಾನು ಮುಖ್ಯಮಂತ್ರಿ ಆಗಿದ್ದಾಗ ಕೇಂದ್ರ ಸಚಿವರನ್ನು ಈ ವಿಚಾರದಲ್ಲಿ ಭೇಟಿ ಮಾಡಿದ್ದೇನೆ. ಡಿಪಿಆರ್ ಸಿದ್ಧಪಡಿಸಲು ಅವರೇ ಅನುಮತಿ ನೀಡಿದ್ದರು. ಈಗ ಕೇಂದ್ರ ಸರಕಾರ ಸಬೂಬುಗಳನ್ನು ಹೇಳುವುದು, ಹಾಗೂ ಅವರ ನಡವಳಿಕೆ ಗಮನಿಸಿದರೆ ನಮ್ಮ ರಾಜ್ಯದ ಜನತೆಗೆ ದ್ರೋಹ ಮಾಡುವ ಕೆಲಸ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಈ ರೀತಿಯ ತಾರತಮ್ಯ ದೇಶಕ್ಕೆ ಒಳ್ಳೆಯದಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಅವರು ತಾವು ಕನ್ನಡಿಗರು ಅನ್ನೋದನ್ನ ಮರೆತು ಭಾರತೀಯರಾಗಿದ್ದಾರೆ. ಮೊದಲು ನಮ್ಮ ಕನ್ನಡ ತಾಯಿಯನ್ನು ಉಳಿಸಿಕೊಂಡರೆ ಮಾತ್ರ, ಭಾರತ ತಾಯಿಯನ್ನು ಉಳಿಸಿಕೊಳ್ಳಬಹುದು. ಅನ್ನೋದನ್ನ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.
ಚನ್ನಪಟ್ಟಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚುತ್ತಿರುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದ್ದೇನೆ. ಅಲ್ಲದೆ, ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಕ್ರಮಗಳನ್ನು ಸೂಚನೆ ನೀಡಿದ್ದೇನೆ. ಇಂತಹ ಪರಿಸ್ಥಿತಿ ಎದುರಾಗಲು ಕಾರಣಕರ್ತರು ಯಾರೂ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಚನ್ನಪಟ್ಟಣದಲ್ಲಿ ಆದಿಪತ್ಯ ಪ್ರತಿಷ್ಠಾಪಿಸಿದ್ದೇನೆ ಎಂದು ತೋರಿಸಲು ಪ್ರಯತ್ನ ಪಟ್ಟವರು, ನಿಷ್ಠಾವಂತ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದರು ಎಂದು ಪರೋಕ್ಷವಾಗಿ ಮಾಜಿ ಸಚಿವ ಯೋಗೇಶ್ವರ್ ವಿರುದ್ಧ ಅವರು ಆರೋಪಿಸಿದರು.