ನಾಗರಹೊಳೆ ಅಭಯಾರಣ್ಯಕ್ಕೆ ರಾಜೀವ್ ಗಾಂಧಿ ಹೆಸರು ತೆಗೆದು ಕಾರ್ಯಪ್ಪ ಹೆಸರಿಡುವಂತೆ ಶಾಸಕ ಅಪ್ಪಚ್ಚು ರಂಜನ್ ಒತ್ತಾಯ

Update: 2021-08-13 13:32 GMT

ಮಡಿಕೇರಿ ಆ.13 : ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ ಫೀ.ಮಾ.ಕಾರ್ಯಪ್ಪ ಹೆಸರಿಡುವುದು ಸೂಕ್ತ. ರಾಜೀವ್ ಗಾಂಧಿ ಹೆಸರು ತೆಗೆದು ಕಾರ್ಯಪ್ಪ ಅವರ ನಾಮಕರಣ ಮಾಡಲಿ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸರಕಾರವನ್ನು ಆಗ್ರಹಿಸಿದ್ದಾರೆ. 

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಪ್ಪಚ್ಚು ರಂಜನ್ ರಾಜೀವ್ ಗಾಂಧಿ, ಇಂದಿರಾ ಗಾಂಧಿ ಮತ್ತು ನೆಹರು ಹೆಸರಲ್ಲಿ ಹಲವು ಸಂಸ್ಥೆಗಳಿವೆ. ಆದರೆ ದೇಶದ ಸೇನೆಯ ಮೊದಲ ದಂಡ ನಾಯಕ ಆಗಿದ್ದ ಕೊಡಗಿನ ಕಾರ್ಯಪ್ಪ ಅವರು ಮೂರು ಸೇನಾ ಪಡೆಗಳ ಮುಖ್ಯಸ್ಥರಾಗಿದ್ದವರು. ಅವರಿಗೆ ಗೌರವ ಕೊಡಲು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ ಕಾರ್ಯಪ್ಪ ಅವರ ಹೆಸರಿಡುವುದು ಸೂಕ್ತ. ಈ ಬಗ್ಗೆ ಸರ್ಕಾರಕ್ಕೂ ನಾನು ಆಗ್ರಹಿಸುತ್ತೇನೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೂ ಈ ಕುರಿತು ಪತ್ರ ಬರೆಯುತ್ತೇನೆ ಎಂದು ಹೇಳಿದರು.

ಕಾವೇರಿ ಹೆಸರಿಡಿ

ಕೊಡಗಿನಲ್ಲಿ ಹುಟ್ಟಿ ನಾಡಿನುದ್ದಕ್ಕೂ ಹರಿಯುವ ಕಾವೇರಿಯ ಹೆಸರನ್ನು ಇಂದಿರಾ ಕ್ಯಾಂಟೀನ್‍ಗೆ ಇಡಬೇಕು ಎಂದು ರಂಜನ್ ಒತ್ತಾಯಿಸಿದರು. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರು ಇಂದಿರಾ ಕ್ಯಾಂಟೀನ್‍ಗೆ ಅನ್ನಪೂರ್ಣೇಶ್ವರಿ ಹೆಸರು ಸೂಚಿಸಿರುವುದನ್ನು ಅಲ್ಲಗಳೆದಿರುವ ಶಾಸಕ ಅಪ್ಪಚ್ಚು ರಂಜನ್, ಸಿ.ಟಿ.ರವಿ ಅವರು ಅನ್ನಪೂರ್ಣೇಶ್ವರಿ ಹೆಸರು ಸೂಚಿಸಿರಬಹುದು. ಆದರೆ ಕಾವೇರಿ ಹೆಸರಿಡುವುದು ಒಳ್ಳೆಯದು ಎಂದು ಹೊಸ ಬೇಡಿಕೆ ಮುಂದಿಟ್ಟರು.

ಕಾವೇರಿ ನದಿಯಿಂದ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ಕರ್ನಾಟಕ, ತಮಿಳುನಾಡು ಮತ್ತು ಪಾಂಡಿಚೇರಿ ಸೇರಿ ಮೂರು ರಾಜ್ಯಗಳಿಗೆ ನೀರು ಸಿಗುತ್ತದೆ. ಕರ್ನಾಟಕ, ತಮಿಳುನಾಡಿಗೆ ಕಾವೇರಿ ಮಾತೆ ಕೊಡುಗೆ ದೊಡ್ಡದಿದೆ. ಸಾಕಷ್ಟು ರೈತರು ಕಾವೇರಿ ನೀರು ಬಳಸಿ ಕೃಷಿ ಮಾಡುತ್ತಾರೆ. ಅದರಿಂದ ಬೆಳೆದ ಅನ್ನವನ್ನು ಇಂದಿರಾ ಕ್ಯಾಂಟಿನಗಳಲ್ಲಿ ಊಟ ಮಾಡುತಿದ್ದೇವೆ. ಹೀಗಾಗಿ ಕಾವೇರಿ ಹೆಸರಿಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇಂದಿರಾ ಹೆಸರನ್ನು ತೆಗೆದು ಕಾವೇರಿ ಕ್ಯಾಂಟೀನ್ ಹೆಸರಿಡಲು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಇದೇ ಸಂದರ್ಭ ಶಾಸಕ ಅಪ್ಪಚ್ಚು ರಂಜನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News