ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಗೆ ಮಾತ್ರ ಬೈದಿರುವೆನೇ ಹೊರತು ಇಡೀ ಕಾಂಗ್ರೆಸಿಗರಿಗೆ ಅಲ್ಲ: ಸಚಿವ ಈಶ್ವರಪ್ಪ

Update: 2021-08-13 13:51 GMT

ಶಿವಮೊಗ್ಗ, ಆ.13: ಪ್ರಧಾನಿ ನರೇಂದ್ರ ಮೋದಿ ಅವರನ್ನು ವ್ಯಂಗ್ಯವಾಡಿದ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಗೆ ಮಾತ್ರ ಬೈದಿರುವೆನೇ ಹೊರತು ಇಡೀ ಕಾಂಗ್ರೆಸಿಗರಿಗೆ ಅಲ್ಲ.’ ಎಂದು  ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟನೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಸುಲಭ್ ಶೌಚಾಲಯಕ್ಕೆ ಮೋದಿ ಹೆಸರು ಇಡಬೇಕೆಂದು ವ್ಯಂಗ್ಯವಾಗಿ ಹೇಳಿರುವುದು ಅದೆಷ್ಟು ಸರಿ? ಜಗತ್ತು ಪ್ರೀತಿಸುವ ಮೋದಿ ಅವರಿಗೆ ಈ ರೀತಿ ಹೇಳುವುದು ಹೇಗೆ ಒಪ್ಪಿಕೊಳ್ಳಬೇಕು? ಇದರಿಂದ ಆಕ್ರೋಶಗೊಂಡು ನಾನು ಹೇಳಿಕೆ ನೀಡಿದ್ದೇ. ಆದರೆ ನಾನು ತಕ್ಷಣವೇ ಕ್ಷಮೆ ಕೇಳಿದ್ದೇನೆ. ತಪ್ಪು ಎಂದು ಒಪ್ಪಿಕೊಂಡಿದ್ದೇನೆ. ಕಾಂಗ್ರೆಸಿಗರು ಇದನ್ನು ದೊಡ್ಡ ವಿಷಯ ಮಾಡುತ್ತಿದ್ದಾರೆ ಅಷ್ಟೇ. ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಹರಿಪ್ರಸಾದ್ ಅವರಿಗೆ ಈಗ ಕಿವಿ ಹಿಂಡಬೇಕಲ್ಲವೇ ಎಂದು ಪ್ರಶ್ನಿಸಿದರು.

'ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸಿಗರನ್ನು ನಾನು ಇವತ್ತೂ ಗೌರವಿಸುತ್ತೇನೆ. ಅಲ್ಲದೇ ಅನೇಕ ಆರೆಸ್ಸೆಸ್. ಮುಖಂಡರು ಅಂದು ಕಾಂಗ್ರೆಸ್ ಪಕ್ಷದಲ್ಲೇ ಇದ್ದವರು. ಆದರೆ, ಅಂದಿನ ಕಾಂಗ್ರೆಸ್ ಬೇರೆ, ಇಂದಿನ ಕಾಂಗ್ರೆಸ್ ಬೇರೆ' ಎಂದು ವ್ಯಂಗ್ಯವಾಡಿದರು.

'ಬಿಜೆಪಿ ಮೀಸಲಾತಿ ವಿರೋಧಿ ಎಂದು ಹೇಳುವವರಿಗೆ ಇತಿಹಾಸ ಗೊತ್ತಿರಬೇಕು. ದಲಿತರಿಗೆ ಮೀಸಲಾತಿ ಬೇಡ ಎಂದು ಸುಪ್ರೀಂ ಕೋರ್ಟ್ ಹೇಳಿದರೂ ಕೂಡ ಅಂದು ಪ್ರಧಾನಿಯಾಗಿದ್ದ ವಾಜಪೇಯಿ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿಯನ್ನು ಮುಂದುವರೆಸಿದರು. ಅದೇ ರೀತಿ ಇಂದಿನ ಪ್ರಧಾನಿ ಮೋದಿಯವರು ಕೂಡ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಬೇಡ ಎಂದು ನ್ಯಾಯಾಲಯ ಹೇಳಿದ್ದರೂ ಕೂಡ ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿ ಉಳಿಸಿದವರು. ಈ ಕಾಂಗ್ರೆಸಿಗರಿಗೆ ಇದೆಲ್ಲ ಅರ್ಥವೇ ಆಗುವುದಿಲ್ಲ. ಟೀಕಿಸುವುದಷ್ಟೇ ಇದವರ ಕೆಲಸ. ಮಾಧ್ಯಮಗಳು ಕೂಡ ಇಂತಹ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಬೇಕೆ ವಿನಹ ಕೆಣಕುವಂತಹ ಕೆಲಸ ಮಾಡಬಾರದು' ಎಂದರು.

'ಕೊರೋನ ಇನ್ನು ಸಂಪೂರ್ನ ನಿವಾರಣೆಯಾಗಿಲ್ಲ. ಆದರೆ, ಬಹಳಷ್ಟು ಜನರು ಕೊರೋನಾ ಹೋಗಿಬಿಟ್ಟಿದೆ ಎಂದು ತಪ್ಪಾಗಿ ಭಾವಿಸಿದ್ದಾರೆ.ಜಿಲ್ಲೆಯಲ್ಲಿ ಈ ಬಗ್ಗೆ ಮುಂಜಾಗ್ರತೆ ಕ್ರಮ ಈಗಾಗಲೇ ವಹಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ವೈದ್ಯರು, ಸಿಬ್ಬಂದಿಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಮಕ್ಕಳಿಗೆ ಮೂರನೇ ಅಲೆ ಅಪಾಯಕಾರಿ ಎಂಬ ಹಿನ್ನಲೆಯಲ್ಲಿ ಎಲ್ಲ ರೀತಿಯ ಮುಂಜಾಗ್ರತೆ ಕ್ರಮ ವಹಿಸಲಾಗಿದೆ' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News