ಮೂಡಿಗೆರೆ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿರುವುದು ಸುಳ್ಳಾದರೆ ರಾಜೀನಾಮೆ ನೀಡುವೆ: ಸಿ.ಟಿ.ರವಿ

Update: 2021-08-13 13:56 GMT

ಚಿಕ್ಕಮಗಳೂರು, ಆ.13: ತಾನು ಸಚಿವನಾಗಿದ್ದ ಅವಧಿಯಲ್ಲಿ ಮೂಡಿಗೆರೆ ಕ್ಷೇತ್ರಕ್ಕೆ ಶಕ್ತಿ ಮೀರಿ ಹೆಚ್ಚು ಅನುದಾನ ಕೊಡಿಸಿದ್ದೇನೆ. ಇದು ಜಿಲ್ಲಾಡಳಿತದ ದಾಖಲೆಗಳಲ್ಲಿವೆ, ಇದು ಸುಳ್ಳಾದರೆ ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ಕೊಡುತ್ತೇನೆ. ಸತ್ಯವಾದರೆ ಎಂ.ಪಿ.ಕುಮಾರಸ್ವಾಮಿ ರಾಜೀನಾಮೆ ನೀಡುತ್ತಾರಾ ಎಂದು ಸಿ.ಟಿ.ರವಿ ತಮ್ಮದೇ ಪಕ್ಷದ ಶಾಸಕನ ವಿರುದ್ಧ ಸವಾಲು ಹಾಕಿದ್ದಾರೆ.

ಮೂಡಿಗೆರೆ ತಾಲೂಕನ್ನು ಅತಿವೃಷ್ಟಿ ತಾಲೂಕುಗಳ ಪಟ್ಟಿಗೆ ಸೇರಿಸಿಲ್ಲ ಎಂದು ಆರೋಪಿಸಿದ ವಿಧಾನಸಭೆ ಎದುರು ಧರಣಿ ನಡೆಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ನಗರದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಪತ್ರಿಕ್ರಿಯಿಸಿದ ಸಿ.ಟಿ.ರವಿ, ತಾನು ಸಚಿವನಾಗಿದ್ದ ಅವಧಿಯಲ್ಲಿ ಮೂಡಿಗೆರೆ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಹೆಚ್ಚು ಹಾನಿಯಾಗಿತ್ತು. ಆಗ ಮೂಡಿಗೆರೆ ಕ್ಷೇತ್ರಕ್ಕೆ ಆಧ್ಯತೆ ಮೇರೆಗೆ  ಹೆಚ್ಚು ಅನುದಾನ ಕೊಡಿಸಿದ್ದೇನೆ ಎಂದರು.

ಎಂ.ಪಿ.ಕುಮಾರಸ್ವಾಮಿ ಕ್ಷೇತ್ರದಲ್ಲಿ ತಾನು ಕೊಡಿಸಿರುವ ಅನುದಾನಲ್ಲಿ ಇಂದಿಗೂ ಕಾಮಗಾರಿಗಳು ನಡೆಯುತ್ತಿವೆ. ಮೂಡಿಗೆರೆ ತಾಲೂಕಿನ ಬಲ್ಲಾಳರಾಯನದುರ್ಗ, ದೇವರಮನೆ ಸೇರಿದಂತೆ ವಿವಿಧೆಡೆ ತಾನು ಕೊಡಿಸಿದ ಅನುದಾನದಲ್ಲಿ ಕೆಲಸಗಳು ನಡೆಯುತ್ತಿವೆ. ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಿಗೂ ಹೆಚ್ಚು ಅನುದಾನ ನೀಡಿದ್ದೇನೆ. ಇವೆಲ್ಲಕ್ಕೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಾಖಲೆಗಳಿವೆ. ಅಗತ್ಯವಿದ್ದಲ್ಲಿ ತೆಗೆದು ನೋಡಲಿ ಎಂದ ಅವರು, ಅನುದಾನ ನೀಡಿರುವುದು ಸುಳ್ಳಾದಲ್ಲಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಹೆಚ್ಚು ಅನುದಾನ ನೀಡಿರುವುದು ನಿಜವಾದರೇ ಶಾಸಕ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ? ಎಂದು ಪ್ರಶ್ನಿಸಿದರು.

ಶಾಸಕ ಕುಮಾರಸ್ವಾಮಿ ಅವರು ತಮ್ಮ ಮನಸಿನಲ್ಲಿ ಬೇರೆ ಏನೋ ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ಅವರ ಉದ್ದೇಶ ಬೇರೆ ಏನೋ ಇದೆ ಎಂದು ಸ್ವಪಕ್ಷದ ಶಾಸಕನ ವಿರುದ್ಧ ಸಿಟಿ ರವಿ ಅಸಮಾಧಾನ ಹೊರಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News