×
Ad

ಬಿಜೆಪಿಯವರು ಇತಿಹಾಸ ತಿರುಚುವುದರಲ್ಲಿ ಪ್ರವೀಣರು: ವಿಪಕ್ಷ ನಾಯಕ ಸಿದ್ದರಾಮಯ್ಯ

Update: 2021-08-13 19:33 IST

ಬೆಂಗಳೂರು, ಆ.13: ಭಾರತೀಯ ಜನತಾ ಪಾರ್ಟಿ ಸ್ಥಾಪನೆಯಾದದ್ದು 1980 ರಲ್ಲಿ. ಈ ಪಕ್ಷದ ಯಾವೊಬ್ಬ ನಾಯಕನೂ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗೈದ ಇತಿಹಾಸ ಇರುವುದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ನಾನು ಕಾಂಗ್ರೆಸಿಗ ಎಂಬುದೇ ನಾವು, ನೀವು ಹೆಮ್ಮೆಪಡಬೇಕಾದ ಸಂಗತಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ನಗರದ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ನಡೆದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯವರು ಇತಿಹಾಸ ತಿರುಚುವುದರಲ್ಲಿ, ಸುಳ್ಳು ಹೇಳಿ ಸಮಾಜದ ದಾರಿ ತಪ್ಪಿಸುವುದರಲ್ಲಿ ಪ್ರವೀಣರು. ಜನರಿಗೆ ಸತ್ಯದ ಅರಿವಾದ್ರೆ ಬಿಜೆಪಿ ಜೊತೆ ಯಾರೂ ಹೋಗಲ್ಲ, ಪಕ್ಷದ ಹಿಂಬಾಲಕರು ಕಡಿಮೆಯಾಗ್ತಾರೆ ಅಂತ ಭಯ ಎಂದು ಟೀಕಿಸಿದರು.

ಸಿ.ಟಿ.ರವಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಇವರು ಇತಿಹಾಸ ಓದಿಲ್ಲ ಅನ್ನೋದು ನನ್ನ ಅಭಿಪ್ರಾಯ. ಕಾರಣ ಇತಿಹಾಸದ ಕನಿಷ್ಠ ಜ್ಞಾನ ಇದ್ದರೆ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತವರ ಬಗ್ಗೆ ಹಗುರಾಗಿ ಮಾತನಾಡುತ್ತಾ ಇರಲಿಲ್ಲ. ನಮಗೆ ದೇಶಪ್ರೇಮದ ಪಾಠ ಮಾಡುವ ಬಿಜೆಪಿಯವರು ಎಂದಾದರೂ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರತಿಭಟನೆ ಮಾಡಿದ್ರಾ? ಮೊಘಲರು, ಬ್ರಿಟಿಷರ ಆಸ್ಥಾನದಲ್ಲಿ ಪ್ರಮುಖ ಹುದ್ದೆಯಲ್ಲಿ ಇದ್ದವರು ಇದೇ ಆರೆಸೆಸ್ಸ್ ಹಾಗೂ ಬಿಜೆಪಿಯ ಹಿಂದಿನ ತಲೆಮಾರಿನವರಲ್ಲವೇ? ಎಂದು ಅವರು ಪ್ರಶ್ನಿಸಿದರು.

ಟಿಪ್ಪು ಸುಲ್ತಾನ್ ಆಸ್ಥಾನದಲ್ಲಿ ದಿವಾನರಾಗಿದ್ದವರು ಪೂರ್ಣಯ್ಯನವರಲ್ಲವೇ? ಟಿಪ್ಪು ಜಯಂತಿಗೆ ವಿರೋಧ ಮಾಡೋರು ಪೂರ್ಣಯ್ಯನನ್ನು, ಕೃಷ್ಣಸ್ವಾಮಿಯನ್ನು ಏಕೆ ವಿರೋಧ ಮಾಡಲ್ಲ? ಅವರೆಲ್ಲ ನಮ್ಮವರು ಎಂಬ ಭಾವನೆಯೇ? ನಾಚಿಕೆಯಾಗಬೇಕು ಬಿಜೆಪಿ ನಾಯಕರಿಗೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ರಕ್ಷಾ ರಾಮಯ್ಯ ಸಜ್ಜನ, ಸಂಭಾವಿತ ನಾಯಕ. ಆದರೆ ಕೋಮುವಾದಿಗಳನ್ನು ಖಂಡಿಸುವಾಗ ಅಗ್ರೆಸಿವ್ ಆಗಿರಬೇಕಾಗುತ್ತದೆ. ಬಿಜೆಪಿಯವರು ಢೋಂಗಿಗಳು. ಇಂತಹಾ ಮೋಸಗಾರರು, ಸುಳ್ಳು ಹೇಳುವವರು ಭಾರತದ ರಾಜಕಾರಣದಲ್ಲಿ ಬೇರಾರು ಇಲ್ಲ. ಮೋದಿ ಮೋದಿ ಎಂದು ಕುಣಿಯುತ್ತಿದ್ದ ಯುವಜನತೆ ಇಂದು ಮೋದಿಯವರ ಆಡಳಿತದಿಂದ ಭ್ರಮನಿರಸನರಾಗಿದ್ದಾರೆ. ಹಿಂದೆ ನಾವು ಹೋದ ಕಡೆ ಕೆಲವರು ಮೋದಿ ಮೋದಿ ಎಂದು ಕೂಗುತ್ತಿದ್ದರು, ಈಗ ಅವರೆಲ್ಲಾ ಎಲ್ಲೋದ್ರಪ್ಪಾ? ಏನಾಯ್ತಪ್ಪ ಅವರ ಕತೆ? ಎಂದು ಅವರು ಪ್ರಶ್ನಿಸಿದರು.

ಮೋದಿ ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದರು, ಏಳು ವರ್ಷದಲ್ಲಿ ಹದಿನಾಲ್ಕು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಉದ್ಯೋಗ ಸೃಷ್ಟಿ ಬದಲು ಹನ್ನೆರಡು ಕೋಟಿ ಉದ್ಯೋಗ ನಷ್ಟವಾಗಿದೆ. ಕೆಲಸ ಕೇಳಿದವರಿಗೆ ಪಕೋಡ ಮಾರಿ ಅಂದರು, ಈಗ ಎಣ್ಣೆ ಬೆಲೆ ಇನ್ನೂರು ಆಗಿದೆ. ಉದ್ಯೋಗವಿಲ್ಲದವರು ಪಕೋಡಾ ಮಾರುವುದಾದರೂ ಹೇಗೆ? ಎಂದು ಸಿದ್ದರಾಮಯ್ಯ ಹೇಳಿದರು.

ಮೋದಿ ಹೇಳುತ್ತಿದ್ದ ಅಚ್ಚೇ ದಿನ್ ಕತೆ ಏನಾಯ್ತು? ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೇರಿದೆ. ಕೇಳಿದ್ರೆ ಕಾಂಗ್ರೆಸ್ ಸರಕಾರ ಮಾಡಿದ್ದ ಸಾಲ ತೀರಿಸಲು ಬೆಲೆ ಜಾಸ್ತಿಯಾಗಿದೆ ಅಂತಾರೆ. ಇದು ದೊಡ್ಡ ಸುಳ್ಳು. ಮನಮೋಹನ್ ಸಿಂಗ್ ಕಾಲದಲ್ಲಿ ಡೀಸೆಲ್ ವಿಧಿಸುತ್ತಿದ್ದ ರೂ. 3 ಅಬಕಾರಿ ಸುಂಕವನ್ನು 34 ಕ್ಕೆ ಏರಿಸಿದ್ದು ನರೇಂದ್ರ ಮೋದಿ ಸರಕಾರ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ರೂ. 9 ರಿಂದ ರೂ. 36 ಕ್ಕೆ ಏರಿಕೆ ಮಾಡಿದ್ದು ನರೇಂದ್ರ ಮೋದಿ ಅವರು. ಇದನ್ನು ಹೇಳಿದ್ರೆ ನಮ್ಮ ಬಗ್ಗೆ ಅಪಪ್ರಚಾರ ಮಾಡ್ತಾರೆ ಎಂದು ಬಿಜೆಪಿಯವರು ಒದ್ದಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕಕ್ಕೆ ಹದಿನೈದನೆ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ ರೂ. 5,495 ಕೋಟಿ ವಿಶೇಷ ಅನುದಾನವನ್ನು ತಿರಸ್ಕರಿಸಿದವರು ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಇಂಥವರನ್ನು ನಮ್ಮ ರಾಜ್ಯದಿಂದ ಆಯ್ಕೆ ಮಾಡಿರುವುದು ಕನ್ನಡಿಗರ ತಪ್ಪೇ?  ಎಂದು ಅವರು ಕೇಳಿದರು.

ಕಾಂಗ್ರೆಸ್ ತಂದುಕೊಟ್ಟ ಸ್ವಾತಂತ್ರ್ಯದ ಫಲಾನುಭವಿಗಳಾಗಿ, ಅಂಬೇಡ್ಕರ್ ಅವರ ಸಂವಿಧಾನದ ಕಾರಣದಿಂದ ಇಂದು ಬಿಜೆಪಿಯವರು ಅಧಿಕಾರದಲ್ಲಿದ್ದಾರೆ. ಆದರೆ ನಮ್ಮ ಸಂವಿಧಾನದ ಬಗ್ಗೆಯೂ ಬಿಜೆಪಿಯವರಿಗೆ ಗೌರವವಿಲ್ಲ. ಇತಿಹಾಸ ತಿಳಿಯದವರು ಇತಿಹಾಸ ನಿರ್ಮಿಸಲಾರರು ಎಂದು ಬಾಬಾ ಸಾಹೇಬರು ಹೇಳಿದ್ದರು. ಹಾಗಾಗಿ ಪ್ರತಿಯೊಬ್ಬರು ದೇಶದ ಇತಿಹಾಸ, ಗಾಂಧಿ, ನೆಹರು, ವಲ್ಲಭಭಾಯ್ ಪಟೇಲ್, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸುಭಾμï ಚಂದ್ರ ಬೋಸ್ ಯಾರು ಎಂದು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.

ಬಿಜೆಪಿಯವರು ಜನರಿಗೆ ಸುಳ್ಳು ಹೇಳಿದರೆ ನಾವು ನಮ್ಮ ಇತಿಹಾಸದ ಬಗ್ಗೆ ಸತ್ಯ ಹೇಳೋಣ. ನಮ್ಮ ಯುವಕರು ಈ ಕೆಲಸ ಮಾಡಬೇಕು ಆಗ ಮಾತ್ರ ಭವ್ಯ ಭಾರತ ನಿರ್ಮಾಣ ಸಾಧ್ಯ. ಕೇವಲ ಭಾಷಣದಿಂದ ಭಾರತ ನಿರ್ಮಾಣ ಸಾಧ್ಯವಿಲ್ಲ. ದೇಶ ಈಗಾಗಲೇ ಇಪ್ಪತ್ತೈದು ವರ್ಷ ಹಿಂದಕ್ಕೆ ಹೋಗಿದೆ. ದೇಶದ ಜಿ.ಡಿ.ಪಿ-7.7 ಗೆ ಇಳಿದಿದೆ. ಶೇ.23ರಷ್ಟು ಜನ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬಂದರೆ ದೇಶ ಉಳಿಯಲು ಸಾಧ್ಯವಾ? ನಾನು ನಲವತ್ತು ವರ್ಷಗಳಿಂದ ರಾಜಕಾರಣ ಮಾಡುತ್ತಾ ಬಂದಿದ್ದೇನೆ, ಆದರೆ ಯಾವತ್ತೂ ಇಂತಹಾ ಭ್ರಷ್ಟ ಸರಕಾರವನ್ನು ನೋಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ನಾವೇಕೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇವೆ ಎಂಬುದನ್ನು ಪ್ರತಿಯೊಬ್ಬ ಕಾಂಗ್ರೆಸಿಗ ತಿಳಿದುಕೊಳ್ಳಬೇಕು. ನಾವು ನಮ್ಮ ಪಕ್ಷದ ಸಿದ್ಧಾಂತವನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ದೇಶದ 136 ಕೋಟಿ ಜನರು ನಮ್ಮ ಸಹೋದರ, ಸಹೋದರಿಯರು ಎಂಬ ಭಾವನೆ ಬೆಳೆಸಿಕೊಳ್ಳುವುದೇ ಕಾಂಗ್ರೆಸ್ ಧ್ಯೇಯ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶದ ಅಕ್ಷರಸ್ಥರ ಪ್ರಮಾಣ ಶೇ.18ರಷ್ಟು ಇತ್ತು, ಇವತ್ತು ದೇಶದ ಅಕ್ಷರಸ್ಥರ ಪ್ರಮಾಣ ಶೇ.8ರಷ್ಟು ಆಗಿದ್ದರೆ ಅದಕ್ಕೆ ಕಾಂಗ್ರೆಸ್ ಪಕ್ಷ ಕಾರಣ ಎಂದು ಅವರು ಹೇಳಿದರು.

ಈಶ್ವರಪ್ಪನಂತಹಾ ನಾಯಕರನ್ನು ಪಕ್ಷದಲ್ಲಿ ಇಟ್ಟುಕೊಂಡು ಬಿಜೆಪಿಯವರು ತಾವು ಸಂಭಾವಿತರು, ಸುಸಂಸ್ಕøತರು ಎಂದು ಹೇಳುತ್ತಾರೆ, ಈಶ್ವರಪ್ಪ ಬಾಯಿ ತೆಗೆದರೆ ಹೊಲಸು ಮಾತನಾಡುತ್ತಾರೆ. ಇದೇನಾ ನಿಮ್ಮ ಸಂಸ್ಕಾರ, ಸಂಸ್ಕೃತಿ? ರಕ್ಷಾ ರಾಮಯ್ಯ ನಾಯಕತ್ವದಲ್ಲಿ ಯುವಕರನ್ನು, ವಿದ್ಯಾರ್ಥಿಗಳನ್ನು, ಹಿಂದುಳಿದವರನ್ನು, ದಲಿತರನ್ನು, ಅಲ್ಪಸಂಖ್ಯಾತರನ್ನು, ಆದಿವಾಸಿಗಳನ್ನು ಸೇರಿಸಿಕೊಂಡು ಹೊಸ ಪಡೆಯನ್ನು ಕಟ್ಟಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News