ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿಗೆ 300 ಕೋಟಿ ರೂ. ಬಿಡುಗಡೆ: ಬಸವರಾಜ ಹೊರಟ್ಟಿ

Update: 2021-08-13 14:55 GMT
 ಬಸವರಾಜ ಹೊರಟ್ಟಿ

ಬೆಂಗಳೂರು, ಆ. 13: `ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿಯಾಗಿ 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಇದನ್ನು 2019-20ನೆ ಸಾಲಿನ ಬಿಡುಗಡೆಗೆ ಬಾಕಿಯಿರುವ 300 ಕೋಟಿ ರೂ.ಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು' ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಬಿಡುಗಡೆ ಸಂಬಂಧ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, `2021-22ನೆ ಸಾಲಿಗೆ 2 ಕೋಟಿ ರೂ.ಗಳಿಗೆ ಕ್ರಿಯಾ ಯೋಜನೆ ತಯಾರಿಸಲು ಅನುಮತಿ ನೀಡಿದೆ. ಕೆಎಲ್‍ಎಲ್‍ಎಡಿಎಸ್ ಮಾರ್ಗಸೂಚಿಗಳ ಅನ್ವಯ ಕ್ರಿಯಾ ಯೋಜನೆಯನ್ನು ಪ್ರತಿವರ್ಷ ಜೂನ್ ಅಂತ್ಯದೊಳಗೆ ಅಂತಿಮಗೊಳಿಸಲು ಸೂಚಿಸಿದ್ದು, ಕಾಮಗಾರಿಗಳ ಪ್ರಗತಿಗೆ ಅನುಗುಣವಾಗಿ ಸರಕಾರದಿಂದ ಬಿಡುಗಡೆಯಾಗಿರುವ- ಬಿಡುಗಡೆಯಾಗುವ ಅನುದಾನದಲ್ಲಿ ಭರಿಸಲಾಗುವುದು ಎಂದರು.

2018-19ನೆ ಸಾಲಿಗೆ ಸಂಬಂಧಿಸಿದಂತೆ ಬಾಕಿ ಇರುವ 127.69 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲು ಪ್ರಸಕ್ತ ಲಭ್ಯವಿರುವ ಅನುದಾನ ಪೂರ್ಣವಾಗಿ ವೆಚ್ಚವಾದ ನಂತರ ಪ್ರಸ್ತಾವನೆ ಸಲ್ಲಿಸಲಾಗುವುದು. ಯೋಜನಾ ಇಲಾಖೆಯು ಅನುದಾನವನ್ನು ಕ್ಷೇತ್ರವಾರು ಬಿಡುಗಡೆ ಮಾಡುವ ಬದಲಾಗಿ ಜಿಲ್ಲಾವಾರು ಬಿಡುಗಡೆ ಮಾಡಲು ನಿರ್ಣಯಿಸಲಾಗಿದೆ ಎಂದು ಅವರು ತಿಳಿಸಿದರು.

ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಉಳಿಕೆಯಾದ ಅನುದಾನವನ್ನು ರಾಜ್ಯ ಮಟ್ಟದ ಕೇಂದ್ರೀಕೃತ ಬ್ಯಾಂಕ್ ಖಾತೆಗೆ ಜಮೆಗೊಳಿಸಲಾಗುವುದು. ಶಾಸಕರು ಕಾಮಗಾರಿಗಳನ್ನು ನೀಡಿದ ನಂತರ ಅದು ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳಲಾಗುವುದು. ಶಾಸಕರ ಅನುದಾನ ಬಿಡುಗಡೆಯಲ್ಲಿ ಅಡೆತಡೆಯಾಗದಂತೆ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ತಿಳಿಸಿದರು. ಪರಿಷತ್ತಿನ ಸದಸ್ಯರಾದ ಕೆ.ಸಿ.ಕೊಂಡಯ್ಯ, ಎಸ್.ರವಿ, ಅಪ್ಪಾಜಿಗೌಡ, ಹನುಮಂತ ನಿರಾಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News