ಸಬೂಬು ಹೇಳಿದರೆ ಸಹಿಸುವುದಿಲ್ಲ: ಅಧಿಕಾರಿಗಳಿಗೆ ಸಚಿವ ನಿರಾಣಿ ಎಚ್ಚರಿಕೆ

Update: 2021-08-13 15:27 GMT

ಬೆಂಗಳೂರು, ಆ. 13: `ಆಗುವುದಿಲ್ಲ, ಬರುವುದಿಲ್ಲ ಎಂಬ ಸಬೂಬನ್ನು ಬಿಟ್ಟು ಅಧಿಕಾರಿಗಳು ಮೈಚಳಿ ಬಿಟ್ಟು ಕೆಲಸ ಮಾಡದಿದ್ದರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಹಿಂದೆ-ಮುಂದೆ ನೋಡುವುದಿಲ್ಲ' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಇಂದಿಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ರೇಸ್‍ಕೋರ್ಸ್ ರಸ್ತೆಯ ಖನಿಜ ಭವನದ ಉದ್ಯೋಗ ಮಿತ್ರದಲ್ಲಿರುವ ವಾಣಿಜ್ಯ ಮತ್ತು ಕೈಗಾರಿಕಾ ಅಕಾರಿಗಳ ಜೊತೆ ಔಪಚಾರಿಕ ಸಭೆ ನಡೆಸಿದ ಅವರು, `ಇನ್ನು ಮುಂದೆ ನನ್ನ ಇಲಾಖೆಯಲ್ಲಿ ಆಗುವುದಿಲ್ಲ, ಬರುವುದಿಲ್ಲ ಎಂಬ ಕಾರಣಗಳನ್ನು ನೀಡಲೇಬಾರದು. ಕೆಲಸ ಮಾಡುವುದಷ್ಟೇ ನಿಮ್ಮ ಗುರಿಯಾಗಿರಬೇಕು' ಎಂದು ಅಧಿಕಾರಿಗಳಿಗೆ ಇದೇ ವೇಳೆ ತಾಕೀತು ಮಾಡಿದರು. 

`ಏನೋ ಒಂದು ಮಾಡಬೇಕೆಂಬ ಅಸಡ್ಡೆ ಬೇಡ. ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ನಿಷ್ಠೆ ಇರಬೇಕು. ಬೃಹತ್ ಮತ್ತು ಮಧ್ಯಮ ಕೈಗಾರಿಕೆಯು ಅತ್ಯಂತ ಮಹತ್ವದ ಇಲಾಖೆಯಾಗಿರುವುದರಿಂದ ಇನ್ನು ಮುಂದೆ ಶಿಸ್ತುಬದ್ಧವಾಗಿ ಕೆಲಸ ಮಾಡಲೇಬೇಕೆಂದು ಸೂಚಿಸಿದ ಅವರು, ನಮ್ಮ ಉದ್ದಿಮೆಗಳಿಗೆ ಬಂಡವಾಳ ಹೂಡಿಕೆಯಲ್ಲಿ ಮೊದಲ ಪ್ರಾಶಸ್ತ್ಯ ಕೊಡಬೇಕು ಎಂದು ಸೂಚಿಸಿದರು. 

ನೆರೆಯ ರಾಜ್ಯಗಳಲ್ಲಿ ಅಲ್ಲಿನವರಿಗೆ ಆದ್ಯತೆ ಕೊಡುತ್ತಾರೆ. ಹೊರರಾಜ್ಯದವರಿಗೆ ಬಂಡವಾಳ ಹೂಡಿಕೆ ಮಾಡಿಕೊಂಡು ಲಾಭ ಮಾಡುವವರು ಪುನಃ ಇತ್ತ ಕಡೆ ಬರುವುದಿಲ್ಲ. ಹೀಗಾಗಿ ಸ್ಥಳೀಯರಿಗೆ ಆದ್ಯತೆ ನೀಡುವಂತೆ ಸಲಹೆ ಮಾಡಿದರು. ಇನ್ನು ಮುಂದೆ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿರುವ ರೋಗಗ್ರಸ್ತ ನಿಗಮಗಳನ್ನು ಗುರುತಿಸುವ ಕೆಲಸ ಮಾಡಬೇಕು. ಅವುಗಳ ಪುನಶ್ಚೇತನಕ್ಕೆ ನೀಲನಕ್ಷೆಯನ್ನು ಸಿದ್ದಪಡಿಸಬೇಕು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News