ಕಲಬುರಗಿ: ಪಿಎಸ್‍ಐ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ 400 ಮೀಟರ್ ಓಡಿದ ಗರ್ಭಿಣಿ
ಕಲಬುರಗಿ, ಆ.13: ವೈದ್ಯರ ಸಲಹೆಯನ್ನು ಕಡೆಗಣಿಸಿ, ಗರ್ಭಿಣಿಯೊಬ್ಬರು ಪಿಎಸ್‍ಐ ನೇಮಕಾತಿ ದೈಹಿಕ ಪರೀಕ್ಷೆಯಲ್ಲಿ ಜೀವವನ್ನೇ ಪಣಕ್ಕಿಟ್ಟು 400 ಮೀಟರ್ ದೂರ ಓಡಿರುವ ವಿಚಾರವೊಂದು ಬೆಳಕಿಗೆ ಬಂದಿದೆ.
ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರುವ ಹಾಗೂ ಪೊಲೀಸ್ ಇಲಾಖೆಗೆ ಸೇರಬೇಕೆನ್ನುವ ಆಕೆ ಆಕಾಂಕ್ಷೆ ಹೊಂದಿರುವ ಈ ಮಹಿಳೆ ಅಶ್ವಿನಿ ಸಂತೋಷಕೋರೆ ಎನ್ನಲಾಗಿದ್ದು ಮೂಲತಃ ಇವರು ಬೀದರ್ ಜಿಲ್ಲೆಯ ಮೂಲದವರಾಗಿದ್ದಾರೆ.
ಸಬ್‍ಇನ್‍ಸ್ಪೆಕ್ಟರ್ ಹುದ್ದೆ ಗಿಟ್ಟಿಸಲೇಬೇಕೇನ್ನುವ ಹಠಕ್ಕೆ ಬಿದ್ದಿರುವ ಅಶ್ವಿನಿ ಗರ್ಭಿಣಿ ಎನ್ನುವುದನ್ನು ಮರೆತು ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿರುವುದು ಬಾರಿ ಅಚ್ಚರಿಗೆ ಕಾರಣವಾಗಿದೆ. ನಿಯಮದ ಪ್ರಕಾರ ಗರ್ಭಿಣಿ ಮಹಿಳೆಯರು ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಇಲಾಖೆಯಿಂದ ಗರ್ಭಿಣಿಯರು ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವುದಿಲ್ಲ.
ಆದರೂ ಮಹಿಳೆಯರು ತಮ್ಮ ಗರ್ಭಾವಸ್ಥೆಯನ್ನು ಮುಚ್ಚಿಟ್ಟು ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಈಶಾನ್ಯ ವಲಯ ಐಜಿಪಿ ಮನೀಶ್ ಕರ್ಬಿಕರ್ ತಿಳಿಸಿದ್ದಾರೆ. ಈಗಾಗಲೇ ಅಶ್ವಿನಿ ಎರಡು ಬಾರಿ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆದರೆ ಲಿಖಿತ ಪರೀಕ್ಷೆ ಪೂರ್ಣಗೊಳಿಸಿಲ್ಲ. ಈ ಹಿನ್ನೆಲೆ ಮೂರನೇ ಪ್ರಯತ್ನದಲ್ಲಿ ಗರ್ಭಿಣಿಯಾಗಿದ್ದರೂ ಸಹ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ.