ಬಿಜೆಪಿಯವರು ಅನ್ನ ಕಿತ್ತುಕೊಳ್ಳುವವರೇ ಹೊರತು ನೀಡುವವರಲ್ಲ: ಕಾಂಗ್ರೆಸ್ ಟೀಕೆ

Update: 2021-08-13 16:14 GMT

ಬೆಂಗಳೂರು, ಆ. 13: `ಆರಂಭಿಸುವುದಕ್ಕೂ ಬದಲಾಯಿಸುವುದಕ್ಕೂ ವ್ಯತ್ಯಾಸವಿದೆ. ಬಿಜೆಪಿಯವರೇ ನಿಮಗೆ ತಾಕತ್ತಿದ್ದರೆ ಪರ್ಯಾಯವಾಗಿ ಹೊಸದಾಗಿ ಆರಂಭಿಸಿ, ನೋಡೋಣ! ಅನ್ನಭಾಗ್ಯದ ಅಕ್ಕಿ ಕಡಿತಗೊಳಿಸಿ, ಬಿಪಿಎಲ್ ಕಾರ್ಡ್ ರದ್ದುಗೊಳಿಸಿ, ಅಕ್ಕಿ ಕೇಳಿದವರಿಗೆ ಸಾಯುವ ಸಲಹೆ ನೀಡಿದ ನಿಮ್ಮಿಂದ ಅದು ಸಾಧ್ಯವಾಗದು. ನೀವು ಜನರ ಅನ್ನ ಕಿತ್ತುಕೊಳ್ಳುವವರೇ ಹೊರತು ನೀಡುವವರಲ್ಲ' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಇಂದಿರಾ ಕ್ಯಾಂಟೀನ್ ಮಾದರಿಯಾದರೂ ಕಳಪೆ ಗುಣಮಟ್ಟದ `ದೀನ್ ದಯಾಳ್ ಉಪಾಧ್ಯಾಯ ರಸೊಯ್' ಎಂಬ ಕ್ಯಾಂಟೀನ್ ತೆರೆದಿದೆ ಮಧ್ಯಪ್ರದೇಶದ ಬಿಜೆಪಿ ಸರಕಾರ. ಆ ಯೋಜನೆಯ ಹಣ ದೀನದಯಾಳ್ ಆಸ್ತಿ ಮಾರಿದ್ದೇ? ಅಥವಾ ಆತ ಮಾಜಿ ಪ್ರಧಾನಿಯೇ? ಸ್ವತಂತ್ರ ಹೊರಾಟಗಾರನೇ? ದೇಶಕ್ಕೆ ಒಂದು ಹನಿ ಕೊಡುಗೆಯನ್ನೂ ಕೊಡದ ಆತನ ಹೆಸರೇಕೆ?' ಎಂದು ಪ್ರಶ್ನೆ ಮಾಡಿದೆ.

`ಕೊಳಕು ನಾಲಿಗೆಯ ಸಿ.ಟಿ. ರವಿ ಹಿಂದೆ ಪ್ರವಾಸೋದ್ಯಮ ಸಚಿವನಾಗಿದ್ದಾಗ ರಾಜ್ಯದಲ್ಲಿ `ಕ್ಯಾಸಿನೋ' ತೆರೆಯಲು ಮುಂದಾಗಿದ್ದರು. ಸಿ.ಟಿ.ರವಿ ಅವರೇ, ಆ ನಿಮ್ಮ ಮಹತ್ವಾಕಾಂಕ್ಷಿ ಯೋಜನೆಗೆ `ದೀನದಯಾಳ್ ಕ್ಯಾಸಿನೋ ಯೋಜನೆ' ಎಂದು ನಾಮಕರಣ ಮಾಡ್ತಿದ್ರಾ!? ಕ್ಯಾಸಿನೋ, ಜೂಜು, ಬಾರ್, ಹುಕ್ಕಾ, ಚೆಂಡು ಹೂ! ಇವೆಲ್ಲ ಸಿ.ಟಿ.ರವಿಗೆ ಬಹು ಪ್ರಿಯವಾದವು!' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

`ಬಿಜೆಪಿ ಆಡಳಿತದಲ್ಲಿ ಮುಖ್ಯಮಂತ್ರಿ ಕಣ್ಣೀರಿಡುತ್ತಾರೆ. ಶಾಸಕರು ಕಣ್ಣೀರಿಡುತ್ತಾರೆ. ರೈತರು ಕಣ್ಣೀರಿಡುತ್ತಿದ್ದಾರೆ. ಮಹಿಳೆಯರು ಕಣ್ಣೀರಿಡುತ್ತಿದ್ದಾರೆ. ನಿರುದ್ಯೋಗಿಗಳು ಕಣ್ಣೀರಿಡುತ್ತಿದ್ದಾರೆ. ವಿದ್ಯಾರ್ಥಿಗಳು ಕಣ್ಣೀರಿಡುತ್ತಿದ್ದಾರೆ. ನೆರೆ ಸಂತ್ರಸ್ತರು ಕಣ್ಣೀರಿಡುತ್ತಿದ್ದಾರೆ. ಕೋವಿಡ್ ಸೋಂಕಿತರು ಕಣ್ಣೀರಿಡುತ್ತಿದ್ದಾರೆ' ಎಂದು ಕಾಂಗ್ರೆಸ್ ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

`ಬಿಜೆಪಿ ಸರಕಾರದ ಆಡಳಿತ ಹೇಗಿದೆ ಎಂದರೆ, ಆಡಳಿತ ಪಕ್ಷದ ಶಾಸಕರೇ ಕಣ್ಣೀರು ಹಾಕುವಂತೆ! ತಮ್ಮದೇ ಪಕ್ಷದ ಶಾಸಕರ ಅಳಲು ಕೇಳದ ಈ ಸರಕಾರ ಜನರ ನೋವು ಕೇಳಿಸಿಕೊಳ್ಳುವುದು ದೂರದ ಮಾತು, ನೆರೆ ಸಂತ್ರಸ್ತರನ್ನು ಕಡೆಗಣಿಸಿದ ಬಿಜೆಪಿ ಪಕ್ಷಕ್ಕೆ ನಾಚಿಕೆ ಆಗಬೇಕಿತ್ತು, ಆದರೆ ಅವರು ಲಜ್ಜೆ ಬಿಟ್ಟಿರುವುದರಿಂದ ಆಗುತ್ತಿಲ್ಲ!' ಎಂದು ಕಾಂಗ್ರೆಸ್, ರವಿ ವಿರುದ್ಧ ಟೀಕೆ ವ್ಯಕ್ತಪಡಿಸಿದೆ.

`ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರಕ್ಕೆ ನೆರೆ ಪರಿಹಾರವಿಲ್ಲ ಎಂದು ಬಿಜೆಪಿ ಶಾಸಕ ತಮ್ಮದೇ ಸರಕಾರದ ವಿರುದ್ಧ ಪ್ರತಿಭಟಿಸುತ್ತಿದ್ದರೆ, ಅದೇ ಜಿಲ್ಲೆಯ ಸಿ.ಟಿ.ರವಿ `ಚೆಂಡು ಹೂವಿನ ಗಿಡ' ಸೇವಿಸಿ ಬಾಯಿಗೆ ಬಂದಂತೆ ಮಾತಾಡುತ್ತಾ ತಿರುಗುತ್ತಿದ್ದಾರೆ! ತನ್ನ ಜಿಲ್ಲೆಗೆ ನ್ಯಾಯ ಒದಗಿಸುವ ಕೆಲಸ ಮಾಡುವುದು ಅವರ ಆದ್ಯತೆ ಅಲ್ಲವೇ ಅಲ್ಲ' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News