ವಿಧಾನಸೌಧದ ಮುಂಭಾಗದಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ: ಸ್ಪೀಕರ್ ಕಾಗೇರಿ
ಬೆಂಗಳೂರು, ಆ. 13: `ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ವಿಧಾನಸಭೆ ಸಚಿವಾಲಯ ವತಿಯಿಂದ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಿದ್ದು, ಇದೇ ಮೊದಲ ಬಾರಿಗೆ ವಿಧಾನಸೌಧದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಗುತ್ತಿದೆ' ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸೌಧದ ವೈಭವೋಪೇತ ಮೆಟ್ಟಿಲುಗಳ ಮುಂಭಾಗದಲ್ಲಿ ಆ.15ರಂದು ಧ್ವಜಾರೋಹಣ ನೆರವೇರಿಸಲಾಗುವುದು. ಅನಂತರ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿಎಂ ಅವರಿಗೆ ಆಹ್ವಾನ ನೀಡಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಪೂರೈಸುತ್ತಿದೆ. ಮುಂದಿನ ದಿನದಲ್ಲಿ ಯಾವ ರೀತಿಯ ಚಟುವಟಿಕೆಗಳನ್ನು ನಡೆಸಬೇಕೆಂಬುದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಧಾನ ಮಂಡಲ ಅಧಿವೇಶನವನ್ನು ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲೇಬೇಕು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಸರಕಾರ ತೀರ್ಮಾನ ಕೈಗೊಳ್ಳಲಿದೆ. ಅಧಿವೇಶನವನ್ನು ಎಲ್ಲಿ ನಡೆಸಬೇಕು ಮತ್ತು ಎಷ್ಟು ದಿನಗಳ ಕಾಲ ಅಧಿವೇಶನ ನಡೆಸಬೇಕು ಎಂಬುದನ್ನು ತೀರ್ಮಾನ ಕೈಗೊಳ್ಳುವುದು ಸರಕಾರಕ್ಕೆ ಬಿಟ್ಟ ವಿಚಾರ ಎಂದ ಅವರು, ಲೋಕಸಭೆ ಸ್ಪೀಕರ್‍ಗಳಿಗೆ ಗೌರವ ನೀಡದಿರುವ ವಿಪಕ್ಷಗಳ ವರ್ತನೆ ಸರಿಯಲ್ಲ ಎಂದು ಆಕ್ಷೇಪಿಸಿದರು.
ಲೋಕಸಭೆ ಸ್ವೀಕರ್ ಗೆ ಪತ್ರ: ಲೋಕಸಭೆ ಮತ್ತು ರಾಜ್ಯಸಭೆ ಪ್ರಜಾಪ್ರಭುತ್ವದ ದೇಗುಲಗಳು. ಪಾವಿತ್ರ್ಯತೆ ಕಾಪಾಡಿಕೊಳ್ಳಲು ಎಲ್ಲ ರಾಜಕೀಯ ಪಕ್ಷಗಳ ಕರ್ತವ್ಯ. ಇತ್ತೀಚಿನ ದಿನಗಳಲ್ಲಿ ಸದನದ ಮೌಲ್ಯಗಳು ಕುಸಿಯುತ್ತಿರುವುದು ದುರಾದೃಷ್ಟಕರ. ಸಂಸತ್ ಕುಸ್ತಿ ಅಖಾಡ ಸ್ವರೂಪ ಪಡೆದುಕೊಳ್ಳುತ್ತಿರುವುದು ಅಘಾತಕಾರಿ ಸಂಗತಿಯಾಗಿದೆ. ಈ ಸಂಬಂಧ ನಿಯಮಗಳಿಗೆ ತಿದ್ದುಪಡಿ ತರಲು ಸ್ಪೀಕರ್‍ಗೆ ಪತ್ರ ಬರೆಯಲಾಗುವುದು ಎಂದರು.