ಪ್ರೀತಿಸಿದ ಯುವತಿ ಜೊತೆ ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೈದ ಪ್ರಿಯಕರ
ಚಾಮರಾಜನಗರ, ಆ.14: ಪ್ರೀತಿಸಿದ ಯುವತಿ ತನ್ನನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಯುವಕನೋರ್ವ ಯುವತಿಯನ್ನು ತನ್ನ ಕಾರಿನಲ್ಲಿ ಕೂರಿಸಿ ಬೆಂಕಿ ಹಚ್ಚಿಕೊಂಡು ತಾನೂ ಸಾವನ್ನಪ್ಪಿ, ಆಕೆಯ ಸಾವಿಗೂ ಕಾರಣನಾದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮಾಂಬಳ್ಳಿಯಲ್ಲಿ ಶುಕ್ರವಾರ ನಡೆದಿರುವುದು ವರದಿಯಾಗಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಶ್ರೀನಿವಾಸ್ (23) ಹಾಗೂ ಅದೇ ಗ್ರಾಮದ ಕಾಂಚನಾ (22) ಮೃತಪಟ್ಟವರು.
ಕಾರಿನ ಒಳಭಾಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ಶಂಕಿಸಿದ್ದು, ಒಳಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಒಂದೇ ಸೀಟಿನಲ್ಲಿ ಇಬ್ಬರ ತಲೆಬುರುಡೆಗಳು ಮಾತ್ರ ಕಂಡುಬಂದಿವೆ.
ಕಾಂಚನಾ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಆಗಿದ್ದರೆ, ಕೃಷಿಕರಾಗಿದ್ದ ಶ್ರೀನಿವಾಸ್ ಕ್ಯಾಬ್ ಚಾಲಕರಾಗಿದ್ದರು. ಈ ಹಿಂದೆ ಶಿಕ್ಷಣ ಪಡೆಯುತ್ತಿದ್ದಾಗ ಇಬ್ಬರೂ ಸಹಪಾಠಿಗಳಾಗಿದ್ದರು. ಶ್ರೀನಿವಾಸ್ ಅವರು ಕಾಂಚನಾರನ್ನು ಹಲವು ಸಮಯದಿಂದ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಆದರೆ, ಯುವತಿಯ ಕುಟುಂಬದವರಿಗೆ ಇದು ಇಷ್ಟವಿರಲಿಲ್ಲ ಎಂದು ಗೊತ್ತಾಗಿದೆ. ಹಾಗಾಗಿ, ಕಾಂಚನಾ ಕೂಡ ಶ್ರೀನಿವಾಸ್ ಅವರಿಂದ ದೂರ ಇದ್ದರೆನ್ನಲಾಗಿದೆ.
ಇದರಿಂದ ಬೇಸತ್ತಿದ್ದ ಶ್ರೀನಿವಾಸ್ ಅವರು ಕಾಂಚನಾರನ್ನು ಕಾರಿನಲ್ಲಿ ಕೂರಿಸಿಕೊಂಡು ಮಾಂಬಳ್ಳಿಯಿಂದ ಕಿನಕಳ್ಳಿಗೆ ಹೋಗುವ ಮುಖ್ಯ ರಸ್ತೆಯಿಂದ ಎರಡು ಕಿ.ಮೀ. ದೂರದಲ್ಲಿ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಒಳಗೆ ಕುಳಿತುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆನ್ನಲಾಗಿದೆ. ಪಕ್ಕದ ಜಮೀನಿನಲ್ಲಿ ಹಸು ಮೇಯಿಸಿಕೊಂಡಿದ್ದ ವ್ಯಕ್ತಿಯೊಬ್ಬರು, ಕಾರು ಉರಿಯುತ್ತಿದ್ದುದನ್ನು ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದರು.
ಸ್ಥಳಕ್ಕೆ ಪೊಲೀಸರು ಬಂದಾಗ ನಿಲ್ಲಿಸಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿರಬಹುದು ಎಂದು ಭಾವಿಸಿದ್ದರು. ಆದರೆ, ಹತ್ತಿರ ಹೋಗಿ ಇಣುಕಿ ನೋಡಿದಾಗ ಒಳಗಡೆ ಒಂದೇ ಎರಡು ತಲೆ ಬುರುಡೆಗಳು ಕಂಡು ಬಂದವು. ಕಾರಿನ ಬಾಗಿಲು ಲಾಕ್ ಇತ್ತು.
ಆರಂಭದಲ್ಲಿ ಪ್ರೇಮಿಗಳ ಆತ್ಮಹತ್ಯೆ ಎಂದು ಹೇಳಲಾಗಿತ್ತು. ಆದರೆ, ವಿಚಾರಣೆ ನಡೆಸಿದಾಗ ಶ್ರೀನಿವಾಸ್ ಅವರನ್ನು ಕಾಂಚನಾ ಕುಟುಂಬದವರಿಗೆ ಇಷ್ಟಪಡುತ್ತಿರಲಿಲ್ಲ ಹಾಗಾಗಿ ಕಾಂಚನಾ ಶ್ರೀನಿವಾಸ್ ನಿಂದ ದೂರವಾಗಿದ್ದರು ಎಂಬುದು ಗೊತ್ತಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೇ ವಿಚಾರವಾಗಿ ಮೂರು ತಿಂಗಳ ಹಿಂದೆಯೂ ಶ್ರೀನಿವಾಸ್ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ್ದರು ಎಂದು ಅವರ ಸ್ನೇಹಿತರು ತಿಳಿಸಿದರು.