×
Ad

ವಾಜಪೇಯಿ ಮದ್ಯಪಾನ ಮಾಡುತ್ತಿದ್ದರು, ಹಾಗಾದರೆ ಬಾರ್ ಗಳಿಗೆ ಅವರ ಹೆಸರು ಇಡಬೇಕಾ?: ಪ್ರಿಯಾಂಕ್ ಖರ್ಗೆ

Update: 2021-08-14 14:38 IST

ಕಲಬುರಗಿ, ಆ.14: "ನೆಹರು ಸಿಗರೇಟು ಸೇದುತ್ತಿದ್ದರೆ ಅದು ಅಪರಾಧನಾ? ಬಿಜೆಪಿಯಲ್ಲಿ ಯಾರೂ ಸಿಗರೇಟ್ ಸೇದೋದಿಲ್ವ ? ಅಟಲ್ ಬಿಹಾರಿ ವಾಜಪೇಯಿ ಅವರು ಮದ್ಯಪಾನ ಮಾಡುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಹಾಗಾದರೆ ಬಾರ್ ಗಳಿಗೆ ವಾಜಪೇಯಿ ಹೆಸರು ಇಡಬೇಕಾ?" ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿ ಮುಖಂಡರನ್ನು ಪ್ರಶ್ನಿಸಿದ್ದಾರೆ.

ಕಲಬುರಗಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು 'ನೆಹರೂ ಹುಕ್ಕಾ' ಸೇದುತ್ತಿದ್ದರು. ಅವರ ಹೆಸರಿನ ಕೇಂದ್ರ ಬೇಕಾದರೆ ಕಾಂಗ್ರೆಸ್ ನವರು ತೆರೆಯಲಿ ಎನ್ನುತ್ತಾರಲ್ಲ ಎಂದು ಮಾಧ್ಯಮದವರು ಗಮನಸೆಳೆದಾಗ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಯಾರೂ ಸಿಗರೇಟ್ ಸೇದಲ್ವಾ? ನೆಹರು ಸಿಗರೇಟ್ ಸೇದಿದರೆ ಮಾತ್ರ ಅದು ಅಪರಾಧನಾ? ಎಂದು ಮರು ಪ್ರಶ್ನೆ ಹಾಕಿದರು.

ಬಿಜೆಪಿ ಸರ್ಕಾರ ಕಳೆದ ಏಳು ವರ್ಷದಲ್ಲಿ ಯಾವ ಸಾಧನೆ ಮಾಡಿಲ್ಲ. ಒಂದೇ ಒಂದು ಸಂಸ್ಥೆ ಕಟ್ಟಿ‌ಬೆಳೆಸಿಲ್ಲ. ನೆಹರೂ ಕಾಲದಿಂದಲೇ ಸ್ಥಾಪಿಸಲಾದ ಸಂಸ್ಥೆಗಳಿಗೆ ಅವರ ಹೆಸರಿವೆ ಎಂದರು.

ದೇಶದ ಸ್ವಾತಂತ್ರ್ಯಕ್ಕೆ ಬಿಜೆಪಿಯವರ ಕೊಡುಗೆ ಶೂನ್ಯ ಎಂದು ಟೀಕಿಸಿದ ಪ್ರಿಯಾಂಕ್ ಖರ್ಗೆ, ಯಾವುದೇ ಹೋರಾಟ ಮಾಡದ, ಬ್ರಿಟಿಷರು ಹೇಳಿದಂತೆ ಕೇಳಿಕೊಂಡಿದ್ದ ಸಾವರ್ಕರ್ 'ವೀರ್ ಸಾವರ್ಕರ್' ಹೇಗೆ ಆದರು? ಅವರ ಹೆಸರು ಬೆಂಗಳೂರಿನ ಮೇಲ್ಸೇತುವೆಗೆ ಯಾಕೆ ಇಡಲಾಗಿದೆ ? ಈ ಎಲ್ಲ ವಿಚಾರಗಳನ್ನು ಮರೆಮಾಚಿದ ಬಿಜೆಪಿಗರು, ಇಂದಿರಾ ಕ್ಯಾಂಟಿನ್ ಹೆಸರು ಬದಲಾಯಿಸುವಂತೆ ಹುಸಿ ಹೋರಾಟ ನಡೆಸುತ್ತಿದ್ದಾರೆ ಎಂದರು. ಹಾಗಾದರೆ ಸಾವರ್ಕರ್ ವೀರ್ ಸಾವರ್ಕರ್ ಅಲ್ಲವೇ? ಎಂದು ಪತ್ರಕರ್ತರು ಪ್ರಶ್ನಿಸಿದಾಗ, 'ಖಂಡಿತವಾಗಿಯೂ ಅಲ್ಲ. ಅವರ ಕುರಿತಾದ ಬಹಳಷ್ಟು ‌ಪುಸ್ತಕಗಳನ್ನು ಓದಿದ್ದೇನೆ'  ಎಂದರು.

ಹೇಳಿಕೊಳ್ಳುವಂತಹ ಯಾವುದೇ ಸಾಧನೆ ಈ ಸರ್ಕಾರಗಳು ಮಾಡಿಲ್ಲ. ಬಿಜೆಪಿ ನಾಯಕರಿಗೆ ಇತಿಹಾಸ ತಿಳಿದಿಲ್ಲ. ಇತಿಹಾಸ ಗೊತ್ತಿಲ್ಲದವರು ತಾವು ಸಚಿವರಾಗಲು ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಶಾಸಕ ಖನೀಜ್ ಫಾತಿಮಾ, ಮಾಜಿ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರು, ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News