ಬಿಎಸ್‍ವೈ ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಆ. 14: 'ಖಾತೆ ಹಂಚಿಕೆ ಬಿಕ್ಕಟ್ಟಿನ ನಡುವೆಯೇ ಕೆಲ ಶಾಸಕರು ಸಂಪುಟ ಸೇರಲು ಲಾಬಿ ಆರಂಭಿಸಿದ್ದಾರೆ. ಈ ಮಧ್ಯೆಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ಇಲ್ಲಿನ ಕಾವೇರಿಗೆ ಆಗಮಿಸಿದ ಬಸವರಾಜ ಬೊಮ್ಮಾಯಿ ಅವರು ಬಿಎಸ್‍ವೈ ಬಳಿ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದು, ಮುಂದಿನ ವಾರ ಸಿಎಂ ಬಸವರಾಜ ಬೊಮ್ಮಾಯಿ ಅವರು ಆನಂದ್ ಸಿಂಗ್ ಅವರ ಖಾತೆ ಬದಲಾವಣೆ ಸಂಬಂಧ ಹೊಸದಿಲ್ಲಿಗೆ ತೆರಳಲಿದ್ದು, ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ ಎಂದು ಗೊತ್ತಾಗಿದೆ.
ಇದರ ನಡುವೆ ಕೆಲವು ಸಚಿವರು ಇನ್ನೂ `ಖಾತೆ ಬದಲಾವಣೆಗೆ ಪಟ್ಟು' ಮುಂದುವರಿಸಿದ್ದು, ವಸತಿ ಖಾತೆ ಸಿಗದೆ ಅಸಮಾಧಾನಗೊಂಡಿರುವ ಸಚಿವ ಎಂಟಿಬಿ ನಾಗರಾಜ್ ನಡೆಯೂ ನಿಗೂಢವಾಗಿದೆ. ಈ ಎಲ್ಲ ಬೆಳವಣಿಗೆಗಳ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪನವರ ಬಳಿ ಬಿಕ್ಕಟ್ಟು ಶಮನದ ಬಗ್ಗೆ ಸಲಹೆ ಪಡೆದಿದ್ದಾರೆಂದು ಮೂಲಗಳು ತಿಳಿಸಿವೆ.
ಇದೇ ಸಂದರ್ಭದಲ್ಲಿ ಮುಂದಿನ ವಾರ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದು, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಇಂದು ಸಿಎಂ ಬೊಮ್ಮಾಯಿ ಅವರು ಯಡಿಯೂರಪ್ಪನವರ ಬಳಿ ಸುದೀರ್ಘ ಚರ್ಚೆ ನಡೆಸಿ ಮುನಿಸಿಕೊಂಡಿರುವವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕುರಿತಾಗಿ ಸಲಹೆ-ಸೂಚನೆ ಪಡೆದಿದ್ದಾರೆಂದು ತಿಳಿದು ಬಂದಿದೆ.
ಈ ಮಧ್ಯೆ ಸಂಪುಟ ಸೇರ್ಪಡೆಗೆ ಕಸರತ್ತು ನಡೆಸಿರುವ ಮೈಸೂರು ಜಿಲ್ಲೆಯ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಮೇಲ್ಮನೆ ಸದಸ್ಯ ಸಿ.ಪಿ.ಯೋಗೇಶ್ವರ್ ಹಾಗೂ ಕೆಎಂಎಫ್ ಅಧ್ಯಕ್ಷರೂ ಆಗಿರುವ ಬೆಳಗಾವಿ ಜಿಲ್ಲೆಯ ಅರಭಾವಿ ಕ್ಷೇತ್ರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬೆಳಗ್ಗೆ ಇಲ್ಲಿನ ಆರ್‍ಟಿ ನಗರದಲ್ಲಿನ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.
ಅಸಮಾಧಾನ ಇಲ್ಲ: 'ನೂತನ ಸಿಎಂ ಸಂಪುಟ ರಚನೆ ಮಾಡಿದ ನಂತರ ಎರಡು-ಮೂರು ಭಾರಿ ಭೇಟಿ ಮಾಡಿದ್ದೇನೆ. ಇಂದು ಕೂಡ ಅವರನ್ನು ಭೇಟಿಯಾಗಿದ್ದೇನೆ. ಈ ಭೇಟಿಯಲ್ಲೇನು ವಿಶೇಷವಿಲ್ಲ. ನನಗೆ ಸಿಎಂ, ರಾಜ್ಯ ಬಿಜೆಪಿ ನಾಯಕರ ಹಾಗೂ ಹೈಕಮಾಂಡ್ ವಿರುದ್ಧ ಯಾವುದೇ ಅಸಮಾಧಾನವಿಲ್ಲ. ನಾನು ಸಾಮಾನ್ಯ ಕಾರ್ಯಕರ್ತನಾಗಿಯೇ ಪಕ್ಷ ಸಂಘಟನೆ ಮಾಡಿಕೊಂಡು ಹೋಗುತ್ತೇನೆ, ಸಿಎಂ ಮುಂದೆ ಯಾವುದೇ ಬೇಡಿಕೆಯನ್ನಿಟ್ಟಿಲ್ಲ, ಇದಕ್ಕಿಂತ ಹೆಚ್ಚಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಗೌಪ್ಯ ಸಭೆ ನಡೆಸಿಲ್ಲ: ಬಾಲಚಂದ್ರ ಜಾರಕಿಹೊಳಿ
ಮುಖ್ಯಮಂತ್ರಿ ಬೊಮ್ಮಾಯಿ ಅವರ ಸಂಪುಟದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ್ ಅವರಿಗೆ ಅತಿ ಶೀಘ್ರದಲ್ಲೇ ಸ್ಥಾನ ಸಿಗಲಿದೆ. ನಾನು ಸಚಿವ ಸ್ಥಾನಕ್ಕೆ ಆಸೆ ಪಟ್ಟಿಲ್ಲ. ನಾನು ಕೆಎಂಎಫ್‍ನಲ್ಲೇ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ಆ ಹುದ್ದೆಯೇ ಸಾಕು. ನಾವು(ಜಾರಕಿಹೊಳಿ ಸಹೋದರರು) ಪಕ್ಷ ಹಾಗೂ ಸರಕಾರದ ವಿರುದ್ಧ ಹೋಗುವುದಿಲ್ಲ. ಯಾವುದೇ ಗೌಪ್ಯ ಸಭೆ ನಡೆಸಿಲ್ಲ. ವಿಶ್ವಾಸದಿಂದ ಕೆಲ ಶಾಸಕರು ಆಗಾಗ್ಗೆ ಒಂದೆಡೆ ಸೇರುತ್ತೇವೆ ಅಷ್ಟೇ. ಆದರೆ ಆ ಸಭೆಗಳಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ' ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.