ಬಿಜೆಪಿಯವರಿಗೆ ಹೆಸರು ಬದಲಿಸುವುದು ಬಿಟ್ಟು ಬೇರೇನೂ ಗೊತ್ತಿಲ್ಲ: ಪ್ರಿಯಾಂಕ್ ಖರ್ಗೆ
ಕಲಬುರಗಿ, ಆ. 14: `ದೇಶದ ಇತಿಹಾಸವೇ ಗೊತ್ತಿಲ್ಲದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಅಪ್ರಬುದ್ಧವಾಗಿ ಮಾತನಾಡುತ್ತಿದ್ದಾರೆ. ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಹತಾಶೆಯಿಂದ ಬಾಯಿ ಹರಿಬಿಡುತ್ತಿದ್ದು, ಬಿಜೆಪಿಯವರಿಗೆ `ಹೆಸರು ಬದಲಿಸುವುದು' ಬಿಟ್ಟು ಬೇರೆ ಏನೂ ಗೊತ್ತಿಲ್ಲ' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಬಿಜೆಪಿ ನಾಯಕರಿಗೆ ಜನಪರವಾದ ಯಾವುದೇ ಹೊಸ ಯೋಜನೆಗಳನ್ನು ತರುವ ಯೋಗ್ಯತೆ ಇಲ್ಲದೆ ಕಾಂಗ್ರೆಸ್ ನಾಯಕರ ವಿರುದ್ಧ ವೈಯಕ್ತಿಕ ನಿಂದನೆ ಮಾಡಿ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇವರು ಮಾಡಿರುವ ಒಂದು ಹೊಸ ಯೋಜನೆಯನ್ನು ತೋರಿಸಲಿ, ನೆರೆ ಸಂತ್ರಸ್ತರು ಸಂಕಷ್ಟದಲ್ಲಿರುವ ರೈತರಿಗೆ ಎಷ್ಟು ಸ್ಪಂದಿಸಿದ್ದಾರೆಂದು ಹೇಳಲಿ' ಎಂದು ಸವಾಲು ಹಾಕಿದರು.
ಇದೀಗ ಬಡವರಿಗೆ ಕಡಿಮೆ ಬೆಲೆಯಲ್ಲಿ ಊಟ, ಉಪಾಹಾರ ನೀಡುವ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವ ಮಾತುಗಳನ್ನು ಆಡುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಅವರದ್ದೇ ಆಡಳಿತ ಇದೆ. ಹೊಸ ಯೋಜನೆ ತರಲಿ, ಕಟ್ಟಡ ನಿರ್ಮಿಸಲಿ, ಸಂಸ್ಥೆಗಳನ್ನು ಕಟ್ಟಲಿ ಅದಕ್ಕೆ ಬೇಕಿದ್ದರೆ ಅವರ ನಾಯಕರ ಹೆಸರನ್ನಿಡಲಿ. ದೇಶಕ್ಕಾಗಿ ಕೊಡುಗೆ ನೀಡಿದವರ ಹೆಸರಿಡಲು ಯಾರ ಆಕ್ಷೇಪವೂ ಇರುವುದಿಲ್ಲ' ಎಂದು ಪ್ರಿಯಾಂಕ್ ಖರ್ಗೆ ಸಲಹೆ ನೀಡಿದರು.
`ಬ್ರಿಟಿಷರಿಗೆ ಕ್ಷಮಾಪಣ ಪತ್ರ ಬರೆದುಕೊಟ್ಟ ಸಾರ್ವಕರ್ ಹೆಸರಿಡುವುದು ಎಷ್ಟು ಸರಿ. ದೇಶಕ್ಕೆ ಸಾರ್ವಕರ್ ಕೊಡುಗೆ ಏನು?' ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, `ಬಿಜೆಪಿ ನಾಯಕರಂತೆ ನಾವು ಮಾತನಾಡಲಾರಂಭಿಸಿದರೆ ಎಲ್ಲ ನಾಯಕರುಗಳ ಗೌರವಕ್ಕೆ ಧಕ್ಕೆ ಬರುತ್ತದೆ. ನಮಗೆ ವಾಜಪೇಯಿ ಅವರ ಬಗ್ಗೆ ಅಪಾರವಾದ ಗೌರವವಿದೆ. ಸಿ.ಟಿ.ರವಿ ನೆಹರೂ ಬಗ್ಗೆ ಟೀಕೆ ಮಾಡಿದರೆಂದು ವಾಜಪೇಯಿ ಕುಡಿಯುತ್ತಿದ್ದರು, ಮಾಂಸ ತಿನ್ನುತ್ತಿದ್ದರು ಎಂದು ಹೇಳುವುದಿಲ್ಲ. ನಮಗೆ ಸಿ.ಟಿ.ರವಿ ಅವರಂತಹ ಸಂಸ್ಕೃತಿ ಬೇಕಿಲ್ಲ. ಜನಪರವಾದ ಕೆಲಸಗಳ ಬಗ್ಗೆ ಚರ್ಚೆ ಮಾಡಲಿ' ಎಂದು ತಿರುಗೇಟು ನೀಡಿದರು.