ನನಗೂ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಆ. 14: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಬೆನ್ನಲ್ಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, "ನನಗೂ ಯಾವುದೇ ಕಾರಣಕ್ಕೂ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವುದು ಬೇಡ. ಸಾಮಾನ್ಯ ಜನರಂತೆ ನಾನೂ ಸಂಚಾರ ಮಾಡುತ್ತೇವೆ. ಆದರೆ, ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಹೆಚ್ಚು ಹೊತ್ತು ಕಾಯುವುದನ್ನು ತಪ್ಪಿಸಿ" ಎಂದು ಹೇಳುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮುಖ್ಯಮಂತ್ರಿಯವರಿಗೆ ಭದ್ರತೆ ದೃಷ್ಟಿಯಿಂದ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಅವರು ಮನೆ ಅಥವಾ ಕಾರ್ಯಕ್ರಮ, ಕಚೇರಿಯಿಂದ ಹೊರಡುವಾಗಲೇ ಅವರು ಸಂಚಾರ ಮಾಡುವ ರಸ್ತೆಗಳಲ್ಲಿ ಸಾರ್ವಜನಿಕರ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತಿತ್ತು. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕ ಪ್ರಯಾಣಿಕರು ತಾಸು ಗಟ್ಟಲೆ ರಸ್ತೆಯಲ್ಲಿ ನಿಲ್ಲುವ ಮೂಲಕ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಆ ಹಿನ್ನಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, "ನಾನು ಸಾಮಾನ್ಯ ಜನರಂತೆ ಸಂಚಾರ ಮಾಡುತ್ತೇನೆ. ನನ್ನಿಂದ ಇತರ ಸವಾರರಿಗೆ ಮತ್ತು ಜನರಿಗೆ ಯಾವುದೆ ತೊಂದರೆಯಾಗಬಾರದು. ಈ ಹಿನ್ನಲೆ ನನಗೆ ಝೀರೋ ಟ್ರಾಫಿಕ್‍ನ ಅಗತ್ಯವಿಲ್ಲ. ಆದರೆ, ಬೆಂಗಳೂರು ನಗರದಲ್ಲಿ ಸಿಗ್ನಲ್‍ಗಳಲ್ಲಿ ಹೆಚ್ಚಿದ್ದು, ಹಲವು ಗಂಟೆಗಳ ಕಾಲ ಕಾದು ನಿಲ್ಲಬೇಕಿರುವ ಹಿನ್ನಲೆ ತಮ್ಮ ವಾಹನ ಬಂದ ಸಮಯದಲ್ಲಿ ಸಿಗ್ನಲ್‍ಗಳಲ್ಲಿ ಬೇಗ ಹೋಗಲು ಅನುವು ಮಾಡಿಕೊಟ್ಟರೆ ಸಾಕು" ಎಂದು ಸೂಚನೆ ನೀಡಿದ್ದಾರೆ.
ಸರಕಾರಿ ಕಾರ್ಯಕ್ರಮದಲ್ಲಿ ಹಾರ-ತುರಾಯಿ ಬದಲಿಗೆ ಪುಸ್ತಕಗಳನ್ನು ನೀಡುವಂತೆ ಆದೇಶ ಹೊರಡಿಸಿದ್ದರು. ಅಲ್ಲದೆ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಪ್ರವಾಸಿ ಮಂದಿರ ಸೇರಿದಂತೆ ಖಾಸಗಿ ಸ್ಥಳಗಳಲ್ಲಿ ಪೊಲೀಸ್ ಗೌರವ ವಂದನೆ ನಿಷೇಧಿಸಿದ್ದು, ಸರಕಾರಿ ಕಚೇರಿ ಆವರಣದಲ್ಲಿ ಮಾತ್ರ ಗೌರವ ರಕ್ಷೆಯನ್ನು ಸಲ್ಲಿಸತಕ್ಕದ್ದು ಎಂದು ಆದೇಶಿಸಲಾಗಿದೆ. ನೂತನ ಸಿಎಂ ಅವರ ಹೊಸ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.