×
Ad

ಶಿಕಾರಿಪುರದಲ್ಲಿ ಸಂಗೊಳ್ಳಿ ರಾಯಣ್ಣನ ಪುತ್ಥಳಿ ತೆರವು: ಅಭಿಮಾನಿಗಳಿಂದ ಪ್ರತಿಭಟನೆ

Update: 2021-08-14 19:13 IST

ಶಿವಮೊಗ್ಗ: ಶಿಕಾರಿಪುರದ ಎಸ್‌ಎಸ್ ರಸ್ತೆಯಲ್ಲಿ ಪ್ರತಿಷ್ಠಾಪಿಸಲುದ್ದೇಶಿಸಿದ್ದ ಸಂಗೊಳ್ಳಿ ರಾಯಣ್ಣ ಪುತ್ಥಳಿ ತೆರವು ಪ್ರಕರಣ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಪ್ರತಿಷ್ಠಾಪನೆಗೆ ಸಿದ್ದವಾಗಿದ್ದ ರಾಯಣ್ಣನ ಪುತ್ಥಳಿ ತೆರವುಗೊಳಿಸಿದ ತಾಲೂಕು ಆಡಳಿತದ ವಿರುದ್ಧ ರಾಯಣ್ಣ ಅಭಿಮಾನಿಗಳು ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಕೆಲ ಕುರುಬ ಸಂಘಟನೆಗಳು ಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಶಿಕಾರಿಪುರದ ಎಸ್ ಎಸ್ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಿದ್ದರು. ಈ ಪ್ರತಿಮೆಯ ಅನಾವರಣವನ್ನು ಆಗಸ್ಟ್ 19ರಂದು ಕುರುಬ ಸಮಾಜದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಇತರೆ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಸಲು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆದರೆ ಶುಕ್ರವಾರ ತಡ ರಾತ್ರಿ ಪ್ರತಿಮೆ ಪ್ರತಿಷ್ಠಾಪಿಸಲು ಯಾವುದೇ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಶಿಕಾರಿಪುರ ತಹಶೀಲ್ದಾರ್ ಕವಿರಾಜ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಪೊಲೀಸ್ ಬಂದೋಬಸ್ತ್ ನಲ್ಲಿ ಪ್ರತಿಮೆಯನ್ನು ಎಸ್ ಎಸ್ ರಸ್ತೆಯ ಪಕ್ಕದಿಂದ ತೆರವುಗೊಳಿಸಿದ್ದರು. ಇದು  ಶಿಕಾರಿಪುರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಲು ಕಾರಣವಾಗಿತ್ತು.

ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿ ಪ್ರತಿಭಟನೆ ಆರಂಭಿಸಿದರು. ಕುರುಬ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಪ್ರತಿಭಟನೆ ನಡೆಸಿ ಸರ್ಕಾರದಿಂದ ಕೂಡಲೇ ಶಿಕಾರಿಪುರದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಮೆ ತೆರವಿಗೆ ಸಂಸದ ಬಿ.ವೈ ರಾಘವೇಂದ್ರ ಕಾರಣ. ಸಂಗೊಳ್ಳಿ ರಾಯಣ್ಣ ಕುರುಬ ಸಮಾಜದಲ್ಲಿ ಹುಟ್ಟಿರಬಹುದು. ಆದರೆ ಅವರೊಬ್ಬ ಜಾತ್ಯಾತೀತ ವ್ಯಕ್ತಿ, ರಾಷ್ಟ್ರಪ್ರೇಮಿ. ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ನಾಯಕ. ಅಂತಹ ನಾಯಕನಿಗೆ ಅವಮಾನ ಮಾಡಿದ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುವುದಿಲ್ಲ. ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪನೆಯಾಗದಿದ್ದರೆ ಉಗ್ರ ಹೋರಾಟ ರೂಪಿಸುತ್ತೇವೆ.
-ಹುಲ್ಮಾರ್ ಮಹೇಶ್,


ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವುಗೊಳಿಸಿದ್ದನ್ನು ತೀವ್ರವಾಗಿ ಖಂಡಿಸಿಸುತ್ತೇವೆ. ಪ್ರತಿಮೆ ಪುನರ್ ಸ್ಥಾಪಿಸದಿದ್ದರೆ ಶಿಕಾರಿಪುರ ಬಂದ್ ಮಾಡಲಾಗುತ್ತದೆ.
-ವೇಣುಗೋಪಾಲ್, ಕುರುಬ ಸಮಾಜದ ಹಿರಿಯ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News