ಸದ್ಯಕ್ಕೆ ಬಸ್ ಪ್ರಯಾಣ ದರ ಏರಿಕೆ ಇಲ್ಲ: ಸಚಿವ ಶ್ರೀರಾಮುಲು
ಬಳ್ಳಾರಿ, ಆ.14: ಇಂಧನ ಬೆಲೆ ಅಧಿಕವಾಗಿದ್ದರೂ, ಬಸ್ ಪ್ರಯಾಣ ದರವನ್ನು ಸದ್ಯಕ್ಕೆ ಹೆಚ್ಚಳ ಮಾಡುವ ಉದ್ದೇಶ ಹೊಂದಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಶನಿವಾರ ಇಲ್ಲಿನ ಬಳ್ಳಾರಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸ್ ದರ ಹೆಚ್ಚಿಸಿದರೆ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಇದರ ಬದಲಾಗಿ ಎಲೆಕ್ಟ್ರಿಕಲ್ ಬಸ್‍ಗಳನ್ನು ಓಡಿಸಲು ಯೋಜನೆ ರೂಪಿಸಲಾಗಿದ್ದು, ಟೆಂಡರ್ ಕೂಡ ಕರೆಯಲಾಗಿದೆ ಎಂದರು.
ಮೊದಲ ಹಂತದಲ್ಲಿ ರಾಜಧಾನಿ ಬೆಂಗಳೂರು ಸೇರಿ ದೊಡ್ಡ ನಗರಗಳಲ್ಲಿ ಎಲೆಕ್ಟ್ರಿಕಲ್ ಬಸ್ ಓಡಿಸಲಾಗುವುದು. ಆರಂಭದಲ್ಲಿ 700 ಬಸ್ ಖರೀದಿಸಲಿದ್ದೇವೆ ಎಂದ ಅವರು, ಹಳೇ ಬಸ್‍ಗಳನ್ನು ಗುಜರಿಗೆ ಬಿಸಾಡುವ ಕೇಂದ್ರ ಸರಕಾರದ ನೀತಿ ಚೆನ್ನಾಗಿದೆ ಎಂದರು.
ಅಲ್ಲದೆ, ಸಾರಿಗೆ ಇಲಾಖೆಯ ನಾಲ್ಕು ನಿಗಮಗಳು ತೀವ್ರ ಆರ್ಥಿಕ ನಷ್ಟದಲ್ಲಿವೆ. ಪ್ರಸಕ್ತ ಸಾಲಿನಲ್ಲಿ 510 ಕೋಟಿ ನಷ್ಟವಾಗಿದೆ. ಕಳೆದ ವರ್ಷ 1280 ಕೋಟಿ ನಷ್ಟವಾಗಿದೆ. ಒಟ್ಟಾರೆ, ನಷ್ಟದಲ್ಲಿರುವ ನಿಗಮಗಳನ್ನು ಲಾಭದತ್ತ ಕೊಂಡೊಯ್ಯಲಾಗುವುದು ಎಂದು ರಾಮುಲು ನುಡಿದರು.