ಗುಂಡ್ಲುಪೇಟೆ: ನಕಲಿ ಕೋವಿಡ್ ರಿಪೋರ್ಟ್ ನೀಡುತ್ತಿದ್ದ ಆರೋಪ; ಯುವಕನ ಬಂಧನ
ಚಾಮರಾಜನಗರ: ತಮಿಳುನಾಡಿಗೆ ಹೋಗುವವರಿಗೆ ನಕಲಿ ಕೋವಿಡ್ ರಿಪೋರ್ಟ್ ನೀಡುತ್ತಿದ್ದ ಆರೋಪದಲ್ಲಿ ಯುವಕನೋರ್ವನನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹಂಗಳಪುರ ಗ್ರಾಮದ ಅನಿಲ್‍ಕುಮಾರ್(35) ಎಂಬಾತ ಬಂಧಿತ ಆರೋಪಿ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಮೊಬೈಲ್ ಸರ್ವೀಸ್ ನಲ್ಲಿ ನಕಲಿ ಆರ್ ಟಿ ಪಿಸಿಆರ್ ವರದಿ ಸಿದ್ದಪಡಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯ ಅಪರಾಧ ಸಬ್ ಇನ್ಸ್ ಪೆಕ್ಟರ್ ಸುಜಾತ ಮತ್ತು ಸಿಬ್ಬಂದಿಗಳು ದಾಳಿನಡೆಸಿದಾಗ ಅಕ್ರಮ ಬಯಲಿಗೆ ಬಂದಿದೆ.
ನೆರೆ ರಾಜ್ಯದಿಂದ ಬರುವವರಿಗೆ ಮತ್ತು ಇಲ್ಲಿಂದ ತೆರಳುತ್ತಿದ್ದವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ, ಲಾರಿ ಚಾಲಕರಿಗೆ ಕಂಪ್ಯೂಟರ್ ಸೆಂಟರ್‌ನಲ್ಲಿ ನಕಲಿ ಕೋವಿಡ್ ರಿಪೋರ್ಟ್ ಪ್ರಮಾಣ ಪತ್ರ ತಯಾರಿಸಿ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ತಮಿಳುನಾಡಿನ ಗಡಿಯಲ್ಲಿ ನಕಲಿ ರಿಪೋರ್ಟ್ ಪತ್ತೆಯಾದ ಹಿನ್ನೆಲೆ ಈ ಅವ್ಯವಹಾರ ಬೆಳಕಿಗೆ ಬಂದಿದೆ. ಗುಂಡ್ಲುಪೇಟೆ ಠಾಣೆಯಲ್ಲಿ ಈತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು , ಪೊಲೀಸರು ತನಿಖೆ ಮುಂದುವರಿಸಿದ್ದಾರೆ .