ನೆಹರೂ, ಇಂದಿರಾಗಾಂಧಿ ಬಗ್ಗೆ ಮಾತನಾಡುವ ಯೋಗ್ಯತೆ ಸಿ.ಟಿ.ರವಿಗೆ ಇಲ್ಲ: ಆರ್. ಧ್ರುವನಾರಾಯಣ್
Update: 2021-08-14 23:11 IST
ಮೈಸೂರು, ಆ.14: ಇಂದಿರಾಗಾಂಧಿ ಈ ದೇಶದ ನಿಜವಾದ ಅನ್ನಪೂರ್ಣೇಶ್ವರಿ. ದೇಶವನ್ನು ಹಸಿವು ಮುಕ್ತಗೊಳಿಸಿದ ನಾಯಕಿ, ನೆಹರೂ ಮತ್ತು ಇಂದಿರಾಗಾಂಧಿ ಬಗ್ಗೆ ಮಾತನಾಡುವ ಯೋಗ್ಯತೆ ಸಿ.ಟಿ.ರವಿಗೆ ಇಲ್ಲ, ಇವರು ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಬೇಜವಾಬ್ದಾರಿ, ಅಪ್ರಸ್ತುತ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ಧಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೋನ ನಿಯಂತ್ರಿಸುವಲ್ಲಿ ವಿಫಲರಾದ ಬಿಜೆಪಿ ಸರಕಾರ ಕೊರೋನ ಹೆಸರಿನಲ್ಲಿ, ರಾಜ್ಯದ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ಮಾಡಿದ್ದಾರೆ. ಬಿಜೆಪಿ ಸರಕಾರದ ಆಡಳಿತದಲ್ಲಿನ ಹುಳುಕನ್ನು ಮರೆಮಾಚಲು ಸಿ.ಟಿ.ರವಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೂಲಕ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.