×
Ad

ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವ ಮೂಲಕ ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ: ಶಾಸಕ ತನ್ವೀರ್ ಸೇಠ್

Update: 2021-08-14 23:28 IST

ಮೈಸೂರು,ಆ.14: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಯ ಮೂಲಕ  ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡಬಾರದು ಎಂದು ಶಾಸಕ ತನ್ವೀರ್ ಸೇಠ್ ಕಿಡಿಕಾರಿದರು.

ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವ ವಿಚಾರಕ್ಕೆ ಮೈಸೂರಿನಲ್ಲಿ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಸಕ ತನ್ವೀರ್ ಸೇಠ್, ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಸೇವೆ ದೇಶಕ್ಕೇ ಗೊತ್ತಿದೆ. ಬಿಜೆಪಿ ಹೆಸರು ಬದಲಾವಣೆಯ ಮೂಲಕ ಈ ರೀತಿಯ ಕೀಳುಮಟ್ಟದ ರಾಜಕೀಯ ಮಾಡಬಾರದು ಎಂದರು.

ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆ. ಈ ಕಾರ್ಯಕ್ರಮವನ್ನೇ ಮುಚ್ಚಲು ಬಿಜೆಪಿ ಸರ್ಕಾರ ಹೊರಟಿತ್ತು. ಆದರೆ ಕೊರೋನ ಸಂಕಷ್ಟದಲ್ಲಿ ಈ ಯೋಜನೆಯೇ ಅನಿವಾರ್ಯವಾಗಿತ್ತು. ಇದೇ ರೀತಿ ರಾಜಕೀಯ ಮಾಡಿದರೆ ನಾವು ಸುಮ್ಮನೆ ಕೂರಲ್ಲ, ಮುಂದೆ ಇದೇ ರೀತಿಯಾದರೆ ನಮ್ಮ ಹೋರಾಟದ ದಾರಿ ಬೇರೆಯಾಗಿರಲಿದೆ ಎಂದು ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.

ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲೇ ಅವರು ಹೇಳಿದ ಹಾಗೆ ಎಲ್ಲ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಿ ಹಾಕಿದ್ದರು. ಕೊರೋನ ಸಂದರ್ಭದಲ್ಲಿ ಮತ್ತೆ ಪ್ರಾರಂಭ ಮಾಡಿ ಅದರಿಂದ ನೊಂದ ಜನರಿಗೆ, ಕೂಲಿಕಾರ್ಮಿಕರಿಗೆ ಇದರಿಂದಾಗಿರುವ ಸಹಾಯವನ್ನು ಕಂಡು ಈಗ ಹೆಸರು ಬದಲಾವಣೆ ಮಾಡಲು ಹೊರಟಿರುವುದು ಇದು ಬಹುಶಃ ವಿನಾಕಾರಣ ರಾಜಕಾರಣ ಮಾಡುತ್ತಿರುವ ಪ್ರಕ್ರಿಯೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News