×
Ad

ಪೌರ ಕಾರ್ಮಿಕರಿಗೆ ಶೌಚಾಲಯ, ವಿಶ್ರಾಂತಿ ಗೃಹ ನಿರ್ಮಿಸಲು ಕ್ರಮ: ಮಾಜಿ ಸಚಿವ ಕೆ.ಜೆ.ಜಾರ್ಜ್

Update: 2021-08-15 18:39 IST

ಬೆಂಗಳೂರು, ಆ. 15: `ನಗರದ ನೈರ್ಮಲ್ಯ ಕಾಪಾಡುವ ಪೌರಕಾರ್ಮಿಕರಿಗೆ ವಾರ್ಡ್‍ಗಳಲ್ಲಿ ಶೌಚಾಲಯ ಸಹಿತ ವಿಶ್ರಾಂತಿ ಗೃಹಗಳಿಲ್ಲದೆ, ಅವರು ಬೀದಿಯಲ್ಲೇ ತಮ್ಮ ದೇಹಬಾಧೆ ತೀರಿಸಿಕೊಳ್ಳಬೇಕಾದ ದುಸ್ಥಿತಿ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಹೀಗಾಗಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿನ ಎಂಟು ವಾರ್ಡ್‍ಗಳನ್ನು ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಿಸಲು ಕೂಡಲೇ ಕ್ರಮ ವಹಿಸುತ್ತೇನೆ' ಎಂದು ಮಾಜಿ ಸಚಿವ ಹಾಗೂ ಸರ್ವಜ್ಞ ನಗರ ಕ್ಷೇತ್ರದ ಹಾಲಿ ಶಾಸಕ ಕೆ.ಜೆ.ಜಾರ್ಜ್ ಇಂದಿಲ್ಲಿ ಭರವಸೆ ನೀಡಿದ್ದಾರೆ.

ರವಿವಾರ ಎಪ್ಪತ್ತೈದನೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕರ್ನಾಟಕ ಬಹುಜನ ಫೆಡರೇಷನ್, ಯುವ್ ಇಂಡಿಯಾ ಹಾಗೂ ಬಿಬಿಎಂಪಿ ಆಶ್ರಯದಲ್ಲಿ ವಾರ್ಡ್ ನಂ.24 ಎಚ್‍ಬಿಆರ್ ಲೇಔಟ್‍ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಂದ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ನಗರವನ್ನು ಶುಚಿಯಾಗಿಡುವ ಪೌರ ಕಾರ್ಮಿಕರು ನೆಮ್ಮದಿಯಾಗಿ ಕೆಲಸ ಮಾಡಲು ಶೌಚಾಲಯ, ವಿಶ್ರಾಂತಿ ಗೃಹ ಅಗತ್ಯ ಎಂದರು.

ಎಲ್ಲ ವಾರ್ಡ್‍ಗಳಲ್ಲಿಯೂ ಶೌಚಾಲಯ ಸಹಿತ ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕಿದೆ. ಈ ಬಗ್ಗೆ ಸರಕಾರ ಗಂಭೀರವಾಗಿ ಆಲೋಚಿಸಬೇಕು. ಪೌರ ಕಾರ್ಮಿಕರು ಸ್ವಾತಂತ್ರ್ಯ ಸೇನಾನಿಗಳಿದ್ದಂತೆ. ಕೊರೋನ ಸೋಂಕಿನ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸಿದ ಜನರ ಆರೋಗ್ಯಕ್ಕೆ ಕೊರೋನ ವಾರಿಯರ್ಸ್‍ಗಳಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಎಷ್ಟು ಗೌರವಿಸಿದರೂ ಕಡಿಮೆ ಎಂದು ಕೆ.ಜೆ.ಜಾರ್ಜ್ ತಿಳಿಸಿದರು.

ಕರ್ನಾಟಕ ಬಹುಜನ ಫೆಡರೇಷನ್ ಅಧ್ಯಕ್ಷ ಜಿ.ಎಚ್.ಶಂಕರ್ ಹಾಗೂ ಪೌರ ಕಾರ್ಮಿಕರು ಸೇರಿದಂತೆ ಸ್ಥಳೀಯ ಮುಖಂಡರು, ಪಾಲಿಕೆ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News