ಸಾಮಾಜಿಕ, ಮಾನವ ಹಕ್ಕುಗಳ ಹೋರಾಟಗಾರರಿಗೆ ದೇಶದಲ್ಲಿ ಭಯದ ವಾತಾವರಣವಿದೆ: ದಿಶಾ ರವಿ

Update: 2021-08-15 15:10 GMT

ಬೆಂಗಳೂರು, ಆ. 15: `ಎಪ್ಪತ್ತೈದನೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಾಮಾಜಿಕ, ಮಾನವ ಹಕ್ಕು ಹೋರಾಟಗಾರರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ' ಎಂದು ಪರಿಸರ ಹೋರಾಟಗಾರ್ತಿ ದಿಶಾ ರವಿ ಆತಂಕ ವ್ಯಕ್ತಪಡಿಸಿದ್ದಾರೆ.

ರವಿವಾರ ಆನ್‍ಲೈನ್‍ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ `ಪ್ರಜಾಪ್ರಭುತ್ವವನ್ನು ರಕ್ಷಿಸಲು ರಾಷ್ಟ್ರೀಯ ಅಭಿಯಾನ'ದ ಅಂಗವಾಗಿ `ನನ್ನ ದೃಷ್ಟಿಯಲ್ಲಿ ಸ್ವಾತಂತ್ರ್ಯ' ಎಂಬ ವಿಷಯದ ಕುರಿತು ಮಾತನಾಡಿದ ಅವರು, `ದೇಶದಲ್ಲಿ ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳುವಂತಹ ವಾತಾವರಣವನ್ನು ಕಸಿದುಕೊಳ್ಳಲಾಗಿದೆ. ಇಂತಹ ಆತಂಕದ ಸಂದರ್ಭದಲ್ಲಿ ದೇಶದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಇದೆಯೇ?' ಎಂದು ಪ್ರಶ್ನಿಸಿದ್ದಾರೆ.

`ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕಾದ ಮಾಧ್ಯಮಗಳು ಟಿಆರ್‍ಪಿ ಹಿಂದೆ ಬಿದ್ದಿವೆ. ದೇಶದಲ್ಲಿ ಸಾಮಾಜಿಕ, ಮಾನವ ಹಕ್ಕು ಹೋರಾಟಗಾರರು ನಿರಂತರವಾಗಿ ಬಂಧನಕ್ಕೊಳಗಾಗುತ್ತಿದ್ದಾರೆ. ಆದರೂ ಮಾಧ್ಯಮಗಳು ಪ್ರಭುತ್ವದ ಪರವಾಗಿ, ಹೋರಾಟಗಾರರ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುತ್ತಿವೆ' ಎಂದು ಅವರು ತಿಳಿಸಿದ್ದಾರೆ.

ಕ್ವಿಲ್ ಫೌಂಡೇಶನ್‍ನ ಶಾರಿಬ್ ಮಾತನಾಡಿ, `ದೇಶದಲ್ಲಿ ಮಾನವೀಯತೆಯನ್ನೆ ಮರೆತು ಯುಎಪಿಎ ಕಾನೂನು ಜಾರಿಗೊಳಿಸಲಾಗುತ್ತಿದೆ. ಬಿಜೆಪಿ ಸರಕಾರ ಯುಎಪಿಎ ಕಾನೂನನ್ನು ಮಾನವ ಹಕ್ಕು ಹೋರಾಟಗಾರರ, ಪರಿಸರ ಹೋರಾಟಗಾರರನ್ನೇ ಗುರಿ ಮಾಡುತ್ತಿದೆ. ಯುಎಪಿಎ ಕಾನೂನನ್ನು ಶಸ್ತ್ರವಾಗಿ ಬಳಕೆ ಮಾಡಿಕೊಂಡು ದೇಶದಲ್ಲಿ ದ್ವೇಷದ ವಾತಾವರಣ ನಿರ್ಮಾಣ ಮಾಡುತ್ತಿದೆ' ಎಂದು ತಿಳಿಸಿದ್ದಾರೆ. 
ಹಿರಿಯ ವಕೀಲ ಜವಹರ್ ರಾಜಾ ಮಾತನಾಡಿ, `ಪ್ರಭುತ್ವ ಯುಎಪಿಎ ಕಾನೂನನ್ನು ಸೈದ್ಧಾಂತಿಕ ಎದುರಾಳಿಗಳ ಮೇಲೆ ಬಳಕೆ ಮಾಡುತ್ತಿದೆ. ವಿವಿಧ ಸಂಘಟನೆಗಳ ಹಲವು ಕಾರ್ಯಕರ್ತರನ್ನು ಜಾಮೀನು ರಹಿತವಾಗಿ ತಿಂಗಳಾನುಗಟ್ಟಲೆ ಬಂಧನದಲ್ಲಿಡಲಾಗುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಈ ವೇಳೆ ಕವಿ ಚಾಂದ್ ಪಾಷಾ, ಸಾಮಾಜಿಕ ಹೋರಾಟಗಾರ ಶಿವಸುಂದರ್ ಕವನ ಓದಿದರು. ನಾಟಕ, ಜಾಗೃತಿ ಗೀತೆಗಳನ್ನು ಹಾಡುವ ಮೂಲಕ ನನ್ನ ದೃಷ್ಟಿಯಲ್ಲಿ ಸ್ವಾತಂತ್ರ್ಯ ಎಂಬ ವಿಚಾರವನ್ನು ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News