ಇಂಥದ್ದೇ ಖಾತೆ ಬೇಕು ಎಂದು ಕೇಳುವ ಸಚಿವರುಗಳು ಆ ಖಾತೆಗಳ ಜ್ಞಾನಿಗಳೇ: ಎಚ್.ವಿಶ್ವನಾಥ್ ಪ್ರಶ್ನೆ
ಮೈಸೂರು: ಇಂತಹದೇ ಖಾತೆ ಬೇಕು ಎಂದು ಕೇಳುತ್ತಿರುವ ಸಚಿವರುಗಳೇನು ಆ ಖಾತೆಗಳ ಜ್ಞಾನಿಗಳೇ? ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಕೆಲವು ಸ್ನೇಹಿತರು ಇಂತಹದೇ ಖಾತೆ ಬೇಕು ಎಂದು ಖ್ಯಾತೆ ತೆಗೆದಿದ್ದಾರೆ. ಅವರೇನು ಆ ಖಾತೆಗಳ ಎಕ್ಸ್‍ಪರ್ಟ್‍ಗಳ? ಮೊದಲು ಸಿಕ್ಕಿರುವ ಖಾತೆಯನ್ನು ಜವಾಬ್ದಾರಿಯಾಗಿ ನಿಬಾಯಿಸಲಿ. ಇವರೆಲ್ಲರೂ ಕ್ಯಾಬಿನೆಟ್ ದರ್ಜೆ ಸಚಿವರುಗಳು, ಇವರು ಸರ್ಕಾರದ ಒಂದು ಭಾಗ, ಅಂತಹದರಲ್ಲಿ ಇಂತಹದೇ ಖಾತೆ ಬೇಕು ಎಂದು ಕೇಳುವುದರಲ್ಲಿ ಅರ್ಥವಿಲ್ಲ ಎಂದು ಕಿಡಿಕಾರಿದರು.
ಈಗಿರುವ ಎಲ್ಲಾ ಖಾತೆಗಳು ಬಹಳ ಜವಬ್ದಾರಿಯುತವಾದವೆ. ಅದನ್ನು ಸಮರ್ಪಕವಾಗಿ ನಿಭಾಯಿಸಿ ಕೆಲಸ ತೆಗೆದುಕೊಳ್ಳಬೇಕು. ಅದು ಬಿಟ್ಟು ಹಣ ಮಾಡುವ ಸಲುವಾಗಿ ಖಾತೆಗಳನ್ನು ಕೇಳಬಾರದು ಎಂದು ಲೇವಡಿ ಮಾಡಿದರು.
ಶಾಸಕರು, ವಿಧಾನಪರಿಷತ್ ಸದಸ್ಯರು ನಿರುದ್ಯೋಗಿಗಳಲ್ಲ. ಮೈಸೂರಿನ ಉಸ್ತುವಾರಿ ಮಂತ್ರಿಗಳು ಬೆಂಗಳೂರಿನಿಂದ ಹೊರಡುವಾಗ ಸಭೆಗೆ ಬರುವಂತೆ ತಿಳಿಸುತ್ತಾರೆ. ನಾವೇನು ಕೆಲಸ ಇಲ್ಲದವರೇ? ಅದಕ್ಕೊಂದು ಶಿಸ್ತು ಬೇಡವೇ. ಶಾಲೆ ಪುನರ್ ಆರಂಭದ ಬಗ್ಗೆ ಮಕ್ಕಳಿಲ್ಲದ ಶಾಸಕರಿಂದ ಅಭಿಪ್ರಾಯ ಕೇಳಿದರೆ ಪ್ರಯೋಜನವೇನು? ಶಿಕ್ಷಕರು, ಪೋಷಕರನ್ನು ಕೂರಿಸಿಕೊಂಡು ಸಭೆ ಮಾಡುವುದು ಒಳಿತು.
-ಎಚ್.ವಿಶ್ವನಾಥ್,
ವಿಧಾನಪರಿಷತ್ ಸದಸ್ಯ.