×
Ad

ತುಮಕೂರು: ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ವಿದ್ಯಾರ್ಥಿ ಕುಟುಂಬಕ್ಕೆ 1 ಲಕ್ಷ ರೂ.ಪರಿಹಾರ ನೀಡಿದ ಸಚಿವ ಬಿ.ಸಿ.ನಾಗೇಶ್

Update: 2021-08-17 17:46 IST

ತುಮಕೂರು ಆ.17:ಸ್ವಾತಂತ್ರ್ಯ ದಿನಾಚರಣೆ ದಿನ ತುಮಕೂರು ತಾಲೂಕಿನ ಕರೀಕೆರೆ ಗ್ರಾಮದ ಶಾಲೆಯಲ್ಲಿ ದ್ವಜಸ್ತಂಭ ಅಳವಡಿಸುವಾಗ ವಿದ್ಯುತ್ ಸ್ವರ್ಶಿಸಿ ಸಾವನ್ನಪ್ಪಿದ ಬಾಲಕ ಚಂದನ್ ಅವರ ಮನೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್  ಭೇಟಿ ನೀಡಿ 1 ಲಕ್ಷ ರೂ.ಪರಿಹಾರ ಚೆಕ್ ವಿತರಣೆ ಮಾಡಿದ್ದಾರೆ.

ನಗರದ ಶ್ರೀ ಸಿದ್ಧಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವನ್ನಪ್ಪಿರುವ ಬಾಲಕ ಅಜ್ಜಿಗೆ ಒಬ್ಬನೇ ಮೊಮ್ಮಗ ಹಾಗೂ ತಾಯಿಗೆ ಒಬ್ಬನೇ ಮಗನಾಗಿದ್ದ.  ಬಾಲಕನನ್ನು ಅಜ್ಜಿ ಕಷ್ಟಪಟ್ಟು ಸಾಕಿ, ಸಲುಹಿದ್ದರು. ತಂದೆಯ ಮುಖವನ್ನೂ ನೋಡದೇ ಇದ್ದ ಬಾಲಕ ಈ ಅನಾವುತಕ್ಕೆ ಬಲಿಯಾಗಿರುವುದು ದುಃಖ ತಂದಿದೆ‌ ಎಂದರು.

ಬಾಲಕನನ್ನು ಕಳೆದುಕೊಂಡ ಅಜ್ಜಿ, ಅಮ್ಮನ ದುಃಖವನ್ನು ನೀಗಿಸುವ ಶಕ್ತಿಯಿಲ್ಲ. ಆದರೆ, ಕುಟುಂಬಕ್ಕೆ ಅವಶ್ಯವಿರುವ ಒಂದಿಷ್ಟು ಸಹಕಾರದ ಹಿನ್ನೆಲೆಯಲ್ಲಿ ಇಲಾಖೆಯಿಂದ ಒಂದು ಲಕ್ಷ ರೂ. ಚೆಕ್ ಕೊಟ್ಟಿದ್ದೇನೆ. ಕುಟುಂಬಸ್ಥರು ಕೆಲಸ ಕೊಡಿಸಿ ಎಂದು ಮನವಿ ತೋಡಿಕೊಂಡಿದ್ದಾರೆ ಈ ಬಗ್ಗೆ ಗಮನಹರಿಸುತ್ತೇನೆ ಎಂದರು.

ಈ ಘಟನೆ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಯಲ್ಲಿಯೂ ಮಾತನಾಡಿದ್ದೇನೆ. ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು.

ಉಳಿದಂತೆ ಈ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದೆ. ಆ ಇಬ್ಬರೂ ಯುವಕರನ್ನು ಇಂದು ಡಿಸ್ಚಾರ್ಜ್ ಆಗಲಿದ್ದಾರೆ. ಅವರ ಚಿಕಿತ್ಸಾ ವೆಚ್ಚ ನಾವೇ ಭರಿಸುತ್ತೇವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 508ಶಾಲೆಗಳ ಮೇಲೆ ಪವರ್ ಲೈನ್ ಹಾದುಹೋಗಿದೆ ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಾಲಕ ಸಾವನ್ನಪ್ಪಿದ ಘಟನೆ ನಡೆದ ತಕ್ಷಣವೇ ಇಂಧನ ಸಚಿವ ಸೇರಿದಂತೆ ಎಲ್ಲ ಎಂಡಿಗಳಿಗೂ ಈ ಬಗ್ಗೆ  ಪತ್ರ ಬರೆದಿದ್ದೇನೆ. ಈ ತರಹದ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಲಾಗುವುದು. ಶಾಲೆಗಳ ಮೇಲೆ ಹಾದು ಹೋಗಿರುವ ಪವರ್ ಲೈನ್ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News