ಖ್ಯಾತ ವೈದ್ಯೆ, ಲೇಖಕಿ ಎಚ್.ಗಿರಿಜಮ್ಮ ನಿಧನ

Update: 2021-08-17 12:56 GMT

ದಾವಣಗೆರೆ, ಆ.17: ಹಿರಿಯ ಲೇಖಕಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಎಚ್.ಗಿರಿಜಮ್ಮ(72) ಮಂಗಳವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರದವರಾದ ಗಿರಿಜಮ್ಮ, ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿ ರಾಜ್ಯದ ವಿವಿಧೆಡೆ ಸ್ತ್ರೀರೋಗ ತಜ್ಞೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಬಾಲ್ಯದಲ್ಲಿಯೇ ಕಾದಂಬರಿಕಾರ್ತಿ ತ್ರಿವೇಣಿಯವರಿಂದ ಪ್ರೇರೇಪಿತರಾಗಿದ್ದ, ವೈದ್ಯಕೀಯ ವೃತ್ತಿಯ ಜತೆಜತೆಗೆ ನಿಮ್ಮ ಮಗು, ಸ್ತ್ರೀ ದೇಹ, ಬಸಿರು, ಬಂಜೆತನ ಮತ್ತು ಪರಿಹಾರ, ಮಕ್ಕಳ ಮನಸ್ಸು ಮತ್ತು ಬೆಳವಣಿಗೆ ಸೇರಿದಂತೆ ಅನೇಕ ವೈದ್ಯಕೀಯ ಪುಸ್ತಕಗಳನ್ನು ಬರೆದಿದ್ದಾರೆ.

ಡಾ.ಎಚ್. ಗಿರಿಜಮ್ಮ ಅವರು ನಮ್ಮ ನಡುವಿನ ಮಹತ್ವದ ಲೇಖಕರು. ವೃತ್ತಿಯಿಂದ ವೈದ್ಯರಾದರೂ ಪ್ರವೃತ್ತಿಯಿಂದ ಸಾಹಿತ್ಯ, ಚಲನಚಿತ್ರ, ಸಾಕ್ಷ್ಯಚಿತ್ರ ಮುಂತಾದ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. ಹದಿನೇಳು ಕಾದಂಬರಿ, ಒಂಭತ್ತು ಕಥಾ ಸಂಕಲನ, ಹತ್ತೊಂಬತ್ತು ವೈದ್ಯ ವಿಜ್ಞಾನದ ಕೃತಿಗಳನ್ನು ಪ್ರಕಟಿಸಿರುವ ಗಿರಿಜಮ್ಮ `ಅಂತರಗಂಗೆʼ ಎಂಬ ಚಲನಚಿತ್ರವನ್ನೂ ನಿರ್ದೇಶಿಸಿದ್ದಾರೆ.

ಹದಿನೈದು ಟೆಲಿ ಫಿಲಂಗಳು, ಐದು ಟೆಲಿ ಧಾರಾವಾಹಿಗಳು ಮತ್ತು ಹತ್ತು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿರುವ ಗಿರಿಜಮ್ಮ, ಹದಿನೈದಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಅಪರೂಪದ ಸಾಧಕಿ ಎನ್ನಿಸಿದ್ದಾರೆ.

ಈಚೆಗಷ್ಟೇ ಅವರ ಆತ್ಮಕಥನ `ಕಾಡತಾವ ನೆನಪುʼ ಬಿಡುಗಡೆಗೊಂಡು, ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದನ್ನು ನೆನಪು ಮಾಡಿಕೊಳ್ಳಬಹುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News