ಸ್ವಯಂಪ್ರೇರಿತರಾಗಿ ಕ್ಷಯರೋಗ ಪರೀಕ್ಷೆಗೆ ಒಳಗಾಗಿ: ಸಚಿವ ಡಾ.ಸುಧಾಕರ್

Update: 2021-08-17 13:57 GMT

ಬೆಂಗಳೂರು, ಆ.17: ಕೋವಿಡ್‍ನಿಂದ ಗುಣಮುಖರಾದವರು ಸ್ವಯಂಪ್ರೇರಿತರಾಗಿ ಕ್ಷಯರೋಗ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಕ್ಷಯರೋಗ ಪತ್ತೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ಸೋಂಕಿನಿಂದ ಗುಣಮುಖರಾದವರಿಗೆ ಕ್ಷಯರೋಗ ಪತ್ತೆ ಮಾಡುವ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ 28 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್‍ನಿಂದ ಗುಣಮುಖರಾಗಿದ್ದು, ಅವರಲ್ಲಿ ಕ್ಷಯರೋಗ ಲಕ್ಷಣಗಳಿವೆ ಎಂಬುದನ್ನು ಪತ್ತೆ ಮಾಡಲಾಗುವುದೆಂದು ತಿಳಿಸಿದ್ದಾರೆ.

ಕೋವಿಡ್‍ನಿಂದ ಗುಣಮುಖರಾದವರು ಸ್ವಯಂಪ್ರೇರಣೆಯಿಂದ ಕ್ಷಯರೋಗ ಪತ್ತೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲೇ ಗುರುತಿಸಿದರೆ ಅಗತ್ಯ ಚಿಕಿತ್ಸೆ ಬೇಗ ನೀಡಿ ಗುಣಮುಖರನ್ನಾಗಿಸಬಹುದು ಎಂದು ಅವರು ಮನವಿ ಮಾಡಿದ್ದಾರೆ.

2017 ರಿಂದ ಆರಂಭಿಸಿ 75 ಲಕ್ಷ ಜನರನ್ನು ಗುರುತಿಸಿ, ಶೇ.88 ಜನರಿಗೆ ಪರೀಕ್ಷೆ ಮಾಡಲಾಗಿದೆ. ಶೇ.3.9 ಜನರಲ್ಲಿ ಕ್ಷಯ ಪತ್ತೆಯಾಗಿದೆ. ಅದೇ ರೀತಿ 2019, 2020 ರಲ್ಲೂ ಮಾಡಲಾಗಿದೆ. ಕೋವಿಡ್‍ನಿಂದಾಗಿ ಕ್ಷಯರೋಗ ಪತ್ತೆ ಪರೀಕ್ಷೆ ಕಡಿಮೆಯಾಗಿದೆ. 2025ರ ವೇಳೆಗೆ ಕ್ಷಯರೋಗ ಮುಕ್ತ ಮಾಡುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಲಸಿಕೆಗೆ ಮನವಿ: ರಾಜ್ಯದಲ್ಲಿ ಡಿಸೆಂಬರ್ ಒಳಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಗುರಿ ಇದೆ. ಹೊಸದೆಲ್ಲಿಗೆ ಪ್ರವಾಸ ಮಾಡಿ ಸಂಬಂಧಿಸಿದ ಕೇಂದ್ರ ಸಚಿವರೊಂದಿಗೆ ಸಮಾಲೋಚಿಸಿ ಹೆಚ್ಚು ಲಸಿಕೆ ಬೇಡಿಕೆ ಇಡಲಾಗುವುದು. ಶೇ.25ರಷ್ಟು ಲಸಿಕೆಯನ್ನು ಖಾಸಗಿ ಕ್ಷೇತ್ರ ನೀಡಬಹುದು. ಕಂಪನಿಗಳು ಸಿಎಸ್‍ಆರ್‍ನಡಿ ಲಸಿಕೆ ಖರೀದಿಸಿ ಸರಕಾರಕ್ಕೆ ನೀಡಿ ಎಂದು ಮನವಿ ಮಾಡಲಾಗುತ್ತಿದೆ. ಇದರಿಂದ ಲಸಿಕೆ ದೊಡ್ಡ ಪ್ರಮಾಣದಲ್ಲಿ ಲಭ್ಯವಾಗಿ ವೇಗವಾಗಿ ನೀಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಆರೋಗ್ಯ ನಂದನ ಕಾರ್ಯಕ್ರಮ

ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ, ಹೊಸ ಕಾರ್ಯಕ್ರಮ ರೂಪಿಸಲಾಗಿದೆ. ರಾಜ್ಯದಲ್ಲಿ ಒಂದೂವರೆ ಕೋಟಿ ಮಕ್ಕಳಿದ್ದು, ಎಲ್ಲರಿಗೂ ಆರೋಗ್ಯ ತಪಾಸಣೆ ಕಾರ್ಯಕ್ರಮ ಆರೋಗ್ಯ ನಂದನಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಈ ಯೋಜನೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳನ್ನು ಗುರುತಿಸಿ, ಪೌಷ್ಠಿಕ ಆಹಾರ ನೀಡಲಾಗುವುದು. ಮುನ್ನೆಚ್ಚರಿಕೆ ಕ್ರಮ ವಹಿಸಿ ಮಕ್ಕಳ ಆರೋಗ್ಯ ಸುಧಾರಿಸಲು ಕ್ರಮ ವಹಿಸಲಾಗುವುದು.

ಮಂಗಳೂರಿನಲ್ಲಿ ಕೋವಿಡ್ ಸೋಂಕಿತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋವಿಡ್ ಸೋಂಕು ಬಂದರೆ ಗುಣಮುಖರಾಗಬಹುದು. ಇದಕ್ಕಾಗಿ ಜೀವನ ಕೊನೆ ಮಾಡಿಕೊಳ್ಳುವುದು ಸರಿಯಲ್ಲ.

-ಡಾ.ಸುಧಾಕರ್, ಆರೋಗ್ಯ ಸಚಿವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News