×
Ad

ಮೈಸೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ರೈತರ ಪ್ರತಿಭಟನೆಯ ಬಿಸಿ

Update: 2021-08-17 21:20 IST

ಮೈಸೂರು,ಆ.17: ಜನಾಶೀರ್ವಾದ ಕಾರ್ಯಕ್ರಮಕ್ಕೆ ಆಗಮಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಮಂಗಳವಾರ ಜನಾಶೀರ್ವಾದ ಸಂಬಂಧ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ  ಸಭೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರುಗಳು ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿ ಕೇಂದ್ರ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಸಚಿವೆ ಶೋಭಾ ಕರಂದ್ಲಾಜೆಗೆ ಮುತ್ತಿಗೆ ಹಾಕಿದ ರೈತರು, ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕಳೆದ ಕೆಲವು ತಿಂಗಳಿನಿಂದ ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದ ಎಲ್ಲಾ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ತಾವು   ಸರ್ಕಾರದ ಪ್ರತಿನಿಧಿಯಾಗಿ ಬಂದಿದ್ದೀರಿ, ನೀವು ದೆಹಲಿಯಲ್ಲಿ ಹೋರಾಟ ಮಾಡುತ್ತಿರುವವರು  ರೈತರಲ್ಲ, ದಳ್ಳಾಳಿಗಳು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದ್ದೀರಿ, ರಾಜಕೀಯ ಪ್ರೇರಿತ ಎಂದು ಹೇಳಿದ್ದೀರಿ, ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದರೆ ಯಾವ ರಾಜಕೀಯ ಪಕ್ಷದಿಂದ ಈ ಕೆಲಸ ಮಾಡುತ್ತಿದ್ದೇವೆಂದು ಬಹಿರಂಗಪಡಿಸಿ ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು ಎಪಿಎಂಸಿ ಕಪಿಮುಷ್ಠಿಯಿಂದ ನಾವು ಹೊರಗೆ ಬರಬೇಕು ಅಂತ. ಅನವಶ್ಯಕವಾಗಿ ಮಾತನಾಡುವುದು ಸರಿಯಲ್ಲ, ನಿಮಗಿದರಿಂದೇನು ನಷ್ಟವಾಗಿದೆ ಇದನ್ನು ಮೊದಲು ಹೇಳಿ ಎಂದರು. ಅಲ್ಲಿ ಕುಳಿತಿರುವವರ ವಿಷಯ ಬೇಡ, ಅಲ್ಲಿ ಕುಳಿತಿರುವವರು ಬೇರೆ ಜನ ಎಂದರು. ಡಾ.ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೇವೆಂದು ಸಭೆಯಲ್ಲಿ ಚರ್ಚೆ ಮಾಡಿದ್ದಾರೆ ಎಂದು ಹೇಳಿದರು. ಸ್ವಾಮಿನಾಥನ್ ವರದಿಯಲ್ಲಿ ಶೇ.90 ಜಾರಿಗೆ ತಂದವರು ಪ್ರಧಾನಿ ಮೋದಿ ದಯಮಾಡಿ ಓದಿ, ಇವತ್ತು ಚರ್ಚೆಯಲ್ಲಿರುವ ವಿಷಯಗಳನ್ನು ನೋಡಿ, ಜಾರಿಗೆ ತಂದ ಮೂರು ಕಾನೂನುಗಳನ್ನು  ಮತ್ತು ಸ್ವಾಮಿನಾಥನ್ ವರದಿಯನ್ನು ಹೋಲಿಕೆ ಮಾಡಿ ನೋಡಿ ಎಂದು ಸಚಿವರು ರೈತ ಮುಖಂಡರಿಗೆ ತಿಳಿಸಿದರು. 

ಪ್ರತಿಭಟನೆಯಲ್ಲಿ ಅತ್ತಹಳ್ಳಿ ದೇವರಾಜ್, ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ದೇವಣ್ಣ, ಮಹದೇವ್, ಸ್ವಾಮಿ, ಶಿವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News