ಗ್ರಾಮೀಣ ವಸತಿ ಯೋಜನೆ: ತ್ವರಿತವಾಗಿ ಫಲಾನುಭವಿಗಳ ವಿವರ ದಾಖಲಿಸಲು ಸಿಎಂ ಸೂಚನೆ

Update: 2021-08-17 17:13 GMT

ಬೆಂಗಳೂರು, ಆ.17: ರಾಜ್ಯದಲ್ಲಿ ವಿವಿಧ ಗ್ರಾಮೀಣ ವಸತಿ ಯೋಜನೆಗಳಡಿ, 4.09 ಲಕ್ಷ ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಬಾಕಿ ಇರುವ 1.67 ಲಕ್ಷ ಮನೆಗಳಿಗೆ ಮುಂದಿನ 15 ದಿವಸದೊಳಗೆ ಜಿಪಿಎಸ್ ಅಪ್ ಲೋಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಆವಾಸ್ ಯೋಜನೆ-(ನಗರ) ಎಎಚ್‍ಪಿ-1.8 ಲಕ್ಷ ಮನೆಗಳು ಕಾಮಗಾರಿ ಪ್ರಾರಂಭವಾಗಿಲ್ಲ. ಈ ಯೋಜನಗೆ ಎಸ್ಸಿ, ಎಸ್ಪಿ/ ಟಿಎಸ್ಪಿ, ಹಿಂದುಳಿದ ವರ್ಗಗಳು ಹಾಗೂ ಕಾರ್ಮಿಕ ಫಲಾನುಭವಿಗಳ ವಂತಿಗೆ ಮೊತ್ತವನ್ನು ಆಯಾ ಇಲಾಖೆಗಳ ಯೋಜನೆಗಳಡಿ ಪಡೆದುಕೊಂಡು, ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಬೆಂಗಳೂರು ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆಯಡಿ 42,361 ಮನೆ ನಿರ್ಮಾಣವಾಗುತ್ತಿದ್ದು ಬಾಕಿ ಮನೆಗಳ ಟೆಂಡರ್ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳಿಸಿ. ರಾಜ್ಯ ಸರಕಾರ ಗ್ರಾಮೀಣ ಪ್ರದೇಶದಲ್ಲಿ ವಿವಿಧ ವಸತಿ ಯೋಜನೆಗಳಡಿ 5 ಲಕ್ಷ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳ ಆಯ್ಕೆಗೆ ಸಿದ್ಧತೆ ನಡೆಸಿಕೊಳ್ಳಿ ಎಂದು ಮುಖ್ಯಮಂತ್ರಿ ತಿಳಿಸಿದರು.

ಪ್ರವಾಹ ಸಂದರ್ಭದಲ್ಲಿ ಮನೆ ಹಾನಿಗೆ ನೀಡಬೇಕಾದ ಪರಿಹಾರ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು. ವಸತಿ ಸಚಿವ ವಿ.ಸೋಮಣ್ಣ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ಕಾರ್ಯದರ್ಶಿ ವಿ.ಪೊನ್ನುರಾಜ್, ವಸತಿ ಇಲಾಖೆ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News