ಹಾಸನ: ಆಲೂರು ಪ. ಪಂ ಸಾಮಾನ್ಯ ಸಭೆಯಲ್ಲಿ 'ಬಾರ್' ಗಾಗಿ ಸದಸ್ಯರ ಕೂಗಾಟ; ಸಾರ್ವಜನಿಕರ ಆಕ್ರೋಶ

Update: 2021-08-19 12:32 GMT

ಹಾಸನ: ದೇಶಾದ್ಯಂತ ಮದ್ಯಪಾನ ನಿಷೇಧಮಾಡಿ ಎಂದು ಅದೋಲನವಾಗುತ್ತಿದ್ದರೆ, ಜಿಲ್ಲೆಯ ಆಲೂರು ಪಟ್ಟಣ ಪಂಚಾಯತಿಯ 7 ಸದಸ್ಯರು ಬಾರ್ ಬೇಕು ಬಾರ್ ಎಂದು ಕೂಗಾಡಿ ಹೋರಾಟ ನಡೆಸಿದ್ದಾರೆ.

ಸಮುದಾಯ ಭವನದ ಪಕ್ಕದಲ್ಲಿ  ಈ ಹಿಂದೆ ಬಾರ್ ತೆರೆಯಲು ಅನುಮತಿ ನೀಡಬಾರದೆಂದು ವಿರೋಧ ವ್ಯಕ್ತಿಪಡಿಸಿದ ಸದಸ್ಯರೇ ಬುಧವಾರ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಬಾರ್ ತೆರೆಯಲು ಅನುಮತಿ ನೀಡಬೇಕೆಂದು ಪಟ್ಟು ಹಿಡಿದಿದ್ದನ್ನು ವಿರೋಧಿಸಿ. ಸದಸ್ಯರ ಸದಸ್ಯತ್ವ ರದ್ದುಪಡಿಸುವಂತೆ ಮುಸ್ಲಿಂ ಸಮುದಾಯದ ಮಹಿಳೆಯರು ಸದಸ್ಯರ ವಿರುದ್ಧ ಧಿಕ್ಕಾರ ಕೂಗಿ ಗುರುವಾರ ಪ್ರತಿಭಟನೆ ನಡೆಸಿದರು. 

ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಜಾಮಿಯಾ ಮಸೀದಿ ಮತ್ತು ವಕ್ಫ್ ಸಮುದಾಯ ಭವನಕ್ಕೆ ಹೊಂದಿಕೊಂಡಂತೆ  ( ಸಿ.ಎಲ್ -7 ) ಬಾರ್ ಅಂಡ್ ರೆಸ್ಟೋರೆಂಟ್ ಉದ್ದಿಮೆಯನ್ನು ಪ್ರಾರಂಭಿಸಲು ನಿರಾಪೇಕ್ಷಣಾ  ಪತ್ರ ನೀಡದಂತೆ ಪ.ಪಂ ಸದಸ್ಯರಾದ ಅಬ್ದುಲ್ ಖುದ್ದೂಸ್, ತಾಹಿರ ಬೇಗಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಅಧ್ಯಕ್ಷೆ ಎಚ್.ಸಿ.ವೇದ ರವರಿಗೆ ಮನವಿ ಪತ್ರ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಮಹಿಳಾ ಸಂಘದ ಅಧ್ಯಕ್ಷೆ ನಾಜಿರಾ ರಹಿಂ ಮಾತನಾಡಿ ಪಟ್ಟಣದ ಮುಖ್ಯರಸ್ತೆಯ 4 ನೇ ವಾರ್ಡಿನಲ್ಲಿರುವ, ಸಮುದಾಯ ಭವನದ ಪಕ್ಕದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಬಾರ್  ಅಂಡ್ ರೆಸ್ಟೋರೆಂಟ್ ಪ್ರಾರಂಭಿಸಲು ಪಟ್ಟಣ ಪಂಚಾಯತ್ ಗೆ ನಿರಾಪೇಕ್ಷಣಾ  ಪತ್ರ ಪಡೆಯಲು ಅರ್ಜಿ ನೀಡಿದ್ದು,ಈ ಹಿಂದೆಯೂ ಸಹ ಸುಣ್ಣದ ಬೀದಿಯ ನಿವಾಸಿ ಹಾಗೂ ಮಹಿಳಾ ಸಂಘ ಮತ್ತು ಜಾಮಿಯಾ ಮಸೀದಿ ವತಿಯಿಂದ ಪ.ಪಂ ನಿಂದ ನಿರಾಪೇಕ್ಷಣಾ ಪತ್ರ ನೀಡದಂತೆ ಮನವಿ ಪತ್ರ ನೀಡಲಾಗಿತ್ತು, ಈ ಪತ್ರಕ್ಕೆ ಪ.ಪಂ. ಸದಸ್ಯರಾದ ಹರೀಶ್ ಮತ್ತು ರಾಣಿ ಎಂಬುವವರೂ ಸಹ ಸಹಿ ಮಾಡಿದ್ದು  ನಿನ್ನೆ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಾರ್ ನಡೆಸಲು ನಿರಾಪೇಕ್ಷಣಾ ಪತ್ರ ನೀಡಲು ಪ್ರಕ್ರಿಯೆ ನಡೆದಿದೆ,  ಬಾರ್ ನಡೆಸಲು  ಅನುಮತಿ ನೀಡಿದರೆ ಸಮುದಾಯ ಭವನದಲ್ಲಿ  ನಡೆಯುವ ಧಾರ್ಮಿಕ ಪ್ರವಚನ, ಅರೇಬಿಕ್ ವಿದ್ಯಾಭ್ಯಾಸ, ಮಹಿಳೆಯರಿಗೆ ನೀಡುವಂತ  ಧಾರ್ಮಿಕ ಪ್ರವಚನ, ನಮಾಜ್ ಇವುಗಳಿಗೆ ತೊಂದರೆ ಆಗುವ ಸಂಭವವಿದೆ, ಜಾಮಿಯಾ  ಸಮುದಾಯ ಭವನ ಕಡುಬಡವರಿಗೆ ಉಚಿತವಾಗಿ ನೀಡುವ ಸಮುದಾಯ ಆಗಿರುತ್ತದೆ,ಆದ ಕಾರಣ ಈ ಸ್ಥಳದಲ್ಲಿ ಬಾರ್ ನಡೆಸಲು ಅನುಮತಿ ನೀಡಬಾರದು ಎಂದರು.

ಪ್ರತಿಭಟನೆಯಲ್ಲಿ ಪ.ಪಂ ಉಪಾಧ್ಯಕ್ಷ ತೋಫಿಕ್, ಸದಸ್ಯರಾದ ಅಬ್ದುಲ್ ಖುದ್ದೂಸ್, ತಾಹಿರಾ ಬೇಗಂ, ಸುಣ್ಣದ ಬೀದಿ  ಮಹಿಳಾ ಸಂಘದ ಅಧ್ಯಕ್ಷೆ  ನಾಜೀರಾ ರಹೀಂ,ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಸ್ಯ ಕಬೀರ್  ಅಹಮದ್, ಮುಸ್ಲಿಂ ಮುಖಂಡರಾದ ಸರ್ವರ್ ಪಾಷಾ, ಅಬ್ದುಲ್ ಹನೀಫ್, ಇಬ್ರಾಹಿಂ, ಅಜ್ಗರ್ ಪಾಷಾ, ಜಮೀಲಾ, ಹಾಜಿರಾ ಬಿ, ಜಬೀನ್ ತಾಜ್, ನಾಜಿಯಾಬಾನು, ರುಕ್ಸಾನಾಬಾನು, ಜಹೇದಾ ಬಾನು,ನುಸ್ರತ್  ಸೇರಿದಂತೆ ಇತರರು ಇದ್ದರು.       

ಬಾರ್ ಗಾಗಿ ಕೂಗಾಡಿದ ಸದಸ್ಯರು:

ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ  ಬುಧವಾರ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ ಅಧ್ಯಕ್ಷೆ  ಹೆಚ್. ಸಿ  ವೇದಾ  ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಬಾರ್ ಬೇಡವೆಂದು ಒತ್ತಾಯಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿ ಬಾರ್ ಗಳನ್ನು ಎತ್ತಂಗಡಿ ಮಾಡಿಸುತ್ತಿದ್ದರೆ ಪ.ಪಂ. ಸಾಮಾನ್ಯ ಸಭೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಬಾರ್ ಒಂದಕ್ಕೆ ಲೈಸೆನ್ಸ್ ನೀಡಬೇಕೆಂದು ಪಟ್ಟಣ ಪಂಚಾಯತ್ ಸದಸ್ಯರು ಪಟ್ಟು ಹಿಡಿದು ಕುಳಿತರು. 

ಈ ಬೆಳವಣಿಗೆ ಯಾವ ಮಟ್ಟಕ್ಕೆ ನಡೆಯಿತೆಂದರೆ ಸದಸ್ಯರು ಎದ್ದು ನಿಂತು ಬಾರ್ ಬೇಕೇಬೇಕು ಬಾರಿಗೆ ಲೈಸೆನ್ಸ್ ನೀಡಲೇಬೇಕೆಂದು ಅಧ್ಯಕ್ಷರನ್ನು ಒತ್ತಾಯಿಸಿದರು.

ಈ ವಿಚಾರವನ್ನು ಚರ್ಚೆ ಮಾಡಿ ಮುಂದಿನ ಸಭೆಯಲ್ಲಿ ತಿಳಿಸುವುದಾಗಿ ಅಧ್ಯಕ್ಷೆ ವೇದ ಮನವಿ ಮಾಡಿದರೂ ಸಹ ಈ ಕ್ಷಣದಲ್ಲಿ ಈ ವಿಚಾರ ತೀರ್ಮಾನವಾದ ಬೇಕೆಂದು ಪಟ್ಟು ಹಿಡಿದರು.

ಪಟ್ಟಣದಲ್ಲಿ  ಅಭಿವೃದ್ಧಿಯಾಗದ ಬಹಳಷ್ಟು ಸಮಸ್ಯೆಗಳಿದ್ದು ಈ ಬಗ್ಗೆ ಎಂದೂ ಗಂಭೀರ ಚರ್ಚೆ ನಡೆಸದ  ಸದಸ್ಯರು. ಬಾರ್ ಲೈಸೆನ್ಸ್ ಬೇಕೆಂದು ಹಠ ಹಿಡಿದು ಕುಳಿತಿದ್ದ ಸದಸ್ಯರ ನಿಲುವು ಹಲವಾರು ಅನುಮಾನ ಹಾಗೂ ಚರ್ಚೆಗೆ ಗ್ರಾಸವಾಗಿದೆ.

ಕೆಲವು ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಬಾರ್ ನಡೆಸಲು ಅನುಮತಿ ನೀಡಬಾರದೆಂದು ಸದಸ್ಯರಾದ ಸಾರ್ವಜನಿಕರ ಪರವಾಗಿ ದೂರು ನೀಡಿದ್ದರು ಆದರೆ ಪಟ್ಟಣ ಪಂಚಾಯತಿಯ ಸಾಮಾನ್ಯಸಭೆಯಲ್ಲಿ ಉಲ್ಟಾ ಹೊಡೆದಿರುವುದು ಇವರುಗಳು ಮಾಲೀಕರಿಂದ ಹಣ ಪಡೆದಿದ್ದಾರೆ ಹಾಗಾಗಿ ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂಬುದು ಜನರಲ್ಲಿ ಚರ್ಚೆಯಾಗುತ್ತಿದೆ ನೀರಿಗಾಗಿ ಜನರಿಗಾಗಿ ಚರ್ಚೆಯಲ್ಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News