ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ನಿಂದ ಷರತ್ತು ಬದ್ಧ ಅನುಮತಿ

Update: 2021-08-19 12:42 GMT

ಹೊಸದಿಲ್ಲಿ, ಆ.19: ಅಕ್ರಮ ಗಣಿ ಹಗರಣದಲ್ಲಿ ಸಿಲುಕಿರುವ ಮಾಜಿ ಸಚಿವ ಜನಾರ್ಧನರೆಡ್ಡಿ ಅವರಿಗೆ ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ ನೀಡಿ ಆದೇಶಿಸಿದೆ. 

ಬಳ್ಳಾರಿಯಲ್ಲಿ ಎಂಟು ವಾರಗಳ ಕಾಲ ತಂಗಲು ಅವಕಾಶವನ್ನು ಕಲ್ಪಿಸುವಂತೆ ಕೋರಿ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ವಿನೀತ್ ಶರಣ್ ನೇತೃತ್ವದ ನ್ಯಾಯಪೀಠದಲ್ಲಿ ನಡೆಯಿತು. 

ಬಳ್ಳಾರಿ ಹಾಗೂ ಅನಂತಪುರಕ್ಕೆ ತೆರಳಲು ನ್ಯಾಯಪೀಠವು ಅನುಮತಿಯನ್ನು ನೀಡಿದ್ದು, ಎಂಟು ವಾರಗಳ ಕಾಲ ಬಳ್ಳಾರಿಯಲ್ಲಿ ಉಳಿದುಕೊಳ್ಳಬಹುದು. ಆದರೆ ಬಳ್ಳಾರಿಗೆ ತೆರಳುವಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸುವಂತೆಯೂ ಸೂಚಿಸಿದೆ.
ಜನಾರ್ಧನ ರೆಡ್ಡಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸಿಬಿಐ ಅನುಮತಿ ನೀಡದಂತೆ ಆಕ್ಷೇಪ ವ್ಯಕ್ತಪಡಿಸಿತ್ತು. ಬಳ್ಳಾರಿ ಹಾಗೂ ಅನಂತಪುರದಲ್ಲಿ ಜನಾರ್ಧನ ರೆಡ್ಡಿ ಅತ್ಯಂತ ಪ್ರಭಾವವನ್ನು ಹೊಂದಿದ್ದಾರೆ. ಹೀಗಾಗಿ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆಯಿದೆ. ಹೀಗಾಗಿ ಅವಕಾಶವನ್ನು ನೀಡಬಾರದು ಎಂದು ಸಿಬಿಐ ಪರ ವಕೀಲರು ವಾದ ಮಂಡಿಸಿದ್ದರು.

ಆದರೆ ಜನಾರ್ದನ ರೆಡ್ಡಿ ಅವರು ಈ ಹಿಂದೆ ಹಲವು ಬಾರಿ ಬಳ್ಳಾರಿಗೆ ತೆರಳಿದ್ದಾರೆ. ಮಗಳ ಮದುವೆ, ಹಬ್ಬದ ಸಂದರ್ಭದಲ್ಲಿಯೂ ಭೇಟಿ ನೀಡಿದ್ದಾರೆ. ಗಣಿ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದ ನಂತರದಲ್ಲಿ ಜನಾರ್ಧನ ರೆಡ್ಡಿ ಅವರು ಎಲ್ಲಿಯೂ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಯಾವುದೇ ವಿಚಾರಣೆಯನ್ನೂ ನಡೆಸಿಲ್ಲ. ಪ್ರಕರಣದ ವಿಚಾರಣೆ ಈಗಾಗಲೇ ಪೂರ್ಣಗೊಂಡಿದೆ. ಇಂತಹ ಸಂದರ್ಭದಲ್ಲಿ ಸಾಕ್ಷ್ಯ ನಾಶ ಮಾಡಲು ಸಾಧ್ಯವಿಲ್ಲ ಎಂದು ಪ್ರತಿವಾದ ಮಂಡಿಸಿದ್ದರು.

ವಾದ ಪ್ರತಿವಾದವನ್ನು ಆಲಿಸಿದ್ದ ನ್ಯಾಯಾಲಯ ಗುರುವಾರ ಜನಾರ್ಧನ ರೆಡ್ಡಿಗೆ ಎರಡು ತಿಂಗಳುಗಳ ಕಾಲ ಬಳ್ಳಾರಿಯಲ್ಲಿ ಉಳಿದುಕೊಳ್ಳಲು ಅವಕಾಶವನ್ನು ಕಲ್ಪಿಸಿದೆ. ಎರಡು ತಿಂಗಳ ವಾಸ್ತವ್ಯದ ನಂತರ ಜನಾರ್ಧನ ರೆಡ್ಡಿ ಮತ್ತೆ ನ್ಯಾಯಾಲಯಕ್ಕೆ ಮನವಿ ಮಾಡುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News