ಯಾದಗಿರಿ: ಬಿಜೆಪಿ ಯಾತ್ರೆ ವೇಳೆ ಗಾಳಿಯಲ್ಲಿ ಗುಂಡು; ಮೂವರು ಪೊಲೀಸರ ಅಮಾನತು

Update: 2021-08-19 13:44 GMT

ಯಾದಗಿರಿ, ಆ.19: ಕೇಂದ್ರ ಸಚಿವ ಭಗವಂತ ಖೂಬಾ ಜನಾಶೀರ್ವಾದ ಯಾತ್ರೆ ವೇಳೆ ಕರ್ತವ್ಯ ಲೋಪವೆಸಗಿದ ಆರೋಪದಡಿ ಮೂವರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ಇಲ್ಲಿನ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ವೀರೇಶ್, ಸಂತೋಷ್ ಮತ್ತು ಮೆಹಬೂಬ್ ಎಂಬುವರು ಅಮಾನತುಗೊಂಡ ಪೇದೆಗಳು ಎಂದು ಹೇಳಿದ್ದಾರೆ.

ಯಾದಗಿರಿ ತಾಲೂಕಿನ ಯರಗೋಳ್ ಬಳಿ ಹಮ್ಮಿಕೊಂಡಿದ್ದ ಜನಾಶೀರ್ವಾದ ಯಾತ್ರೆಯಲ್ಲಿ ಹೆಚ್ಚು ಜನ ಒಗ್ಗೂಡದಂತೆ ಬಿಗಿ ಬಂದೋಬಸ್ತ್‍ಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ, ಕರ್ತವ್ಯದಲ್ಲಿದ್ದ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುವುದನ್ನು ತಡೆದಿಲ್ಲ. ಜತೆಗೆ, ಬಂದೂಕುಗಳನ್ನು ಸಹ ಜಪ್ತಿ ಮಾಡಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು.

ಹೀಗಾಗಿ, ಈ ಮೂವರು ಪೇದೆಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ಮತ್ತೊಂದೆಡೆ ಅನುಮತಿ ಇಲ್ಲದಿದ್ದರೂ, ಬೈಕ್ ರ್ಯಾಲಿ ನಡೆಸಿರುವ ಆಯೋಜಕರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಮಾಹಿತಿ ನೀಡಿದ್ದಾರೆ.

ಖೂಬಾ ಮತ್ತೊಂದು ಎಡವಟ್ಟು

ಬುಧವಾರ ಯಾದಗಿರಿಯಲ್ಲಿ ಮೆರವಣಿಗೆ ಸಂದರ್ಭದಲ್ಲಿ ಕಾರ್ಯಕರ್ತರು ಗುಂಡು ಹಾರಿಸಿದ ಪರಿಣಾಮ ವಿವಾದಕ್ಕೆ ಗುರಿಯಾಗಿದ್ದ ಕೆಂದ್ರ ಸಚಿವ ಭಗವಂತ ಖೂಬಾ ಅವರು ಗುರುವಾರ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಇಲ್ಲಿನ ಬಳ್ಳಾರಿಯ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿ ಕೈಯಿಂದ ಚಪ್ಪಲಿ ತರಿಸಿಕೊಂಡು ಹಾಕಿಕೊಂಡು ಟೀಕೆಗೆ ಗುರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News