ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸಿಎಂ ಘೋಷಿಸಿದ್ದ ಅಮೃತ ಯೋಜನೆಗಳಿಗೆ 400 ಕೋಟಿ ರೂ.ಒದಗಿಸಲು ಸಂಪುಟ ಒಪ್ಪಿಗೆ

Update: 2021-08-19 13:19 GMT

ಬೆಂಗಳೂರು, ಆ. 19: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಆ.15ರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದ ‘ಅಮೃತ ಯೋಜನೆ’ಗಳಿಗೆ ಸಂಪುಟ ಅನುಮೋದನೆ ನೀಡಿದ್ದು, ಆ ಯೋಜನೆಗಳಿಗೆ 400 ಕೋಟಿ ರೂ.ಗಳ ಅನುದಾನ ಒದಗಿಸಲು ಸಂಪುಟ ಸಭೆ ಒಪ್ಪಿಗೆ ನೀಡಲಾಗಿದೆ.

ಗುರುವಾರ ವಿಧಾನಸೌಧದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಮಾಡಲಾಗಿದ್ದು, ಅಮೃತ ಗ್ರಾಮ ಪಂಚಾಯಿತಿ, ಅಮೃತ ಗ್ರಾಮೀಣ ವಸತಿ ಯೋಜನೆ, ಅಮೃತ ರೈತ ಉತ್ಪಾದಕ ಸಂಸ್ಥೆಗಳಿಗೆ ನೆರವು, ಅಮೃತ ನಿರ್ಮಲ ನಗರ, ಶಾಲಾ ಸೌಲಭ್ಯ ಯೋಜನೆ, ಅಂಗನವಾಡಿ ಕೇಂದ್ರಗಳ ಮೇಲ್ದರ್ಜೆಗೆ, ಸ್ವಸಹಾಯ ಕಿರು ಉದ್ದಿಮೆಗಳು, ಸಮುದಾಯ ಅಭಿವೃದ್ಧಿ, ಆರೋಗ್ಯ ಮತ್ತು ಮೂಲಸೌಕರ್ಯ ಉನ್ನತೀಕರಣ ಸೇರಿ 12ಕ್ಕೂ ಹೆಚ್ಚು ಹೊಸ ಯೋಜನೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದರು.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಆರೈಕೆ ನಿಯಮಗಳು-2021ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. 2021-22ನೆ ಸಾಲಿಗೆ ಸರಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳ ಹದಿಹರೆಯದ ಹೆಣ್ಣು ಮಕ್ಕಳಿಗೆ ಶುಚಿ ಕಾರ್ಯಕ್ರಮದಡಿ ಸ್ಯಾನಿಟರಿ ನ್ಯಾಪ್‍ಕಿನ್ ಪ್ಯಾಡ್‍ಗಳನ್ನು 47 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಿ ವಿತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ಆರೋಗ್ಯ ಕೇಂದ್ರಗಳ ಮೇಲ್ದರ್ಜೆಗೆ: ರಾಜ್ಯದಲ್ಲಿನ 2,859 ಆರೋಗ್ಯ ಉಪ ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಒಟ್ಟು 478.91 ಕೋಟಿ ರೂಪಾಯಿಗಳ ಅಂದಾಜು ಮೊತ್ತದಲ್ಲಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ. ಇದರಲ್ಲಿ ಆರೋಗ್ಯ ಪೂರೈಕೆದಾರರ(ನರ್ಸ್) ಹುದ್ದೆಗಳನ್ನು ತಾತ್ಕಾಲಿಕವಾಗಿ ಸೃಜಿಸಲಾಗುತ್ತದೆ ಎಂದರು.

ಉಪಕೇಂದ್ರಕ್ಕೆ ಕೊಠಡಿ ಇಲ್ಲವಾದರೆ ಐದು ಸಾವಿರ ರೂ.ಮೊತ್ತದ ಕಟ್ಟಡ ಬಾಡಿಗೆ ಆಧಾರದಲ್ಲಿ ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ. ಕಾನೂನು ಅಧಿಕಾರಿ (ಕಿರಿಯ) ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆಯ ಕಾನೂನು ಅಧಿಕಾರಿ ಎಂ.ಎಲ್.ಶೈಲಜಾ ಅವರು ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಸೇವೆಯಿಂದ ವಜಾಗೊಳಿಸುವ ಮತ್ತು ದಂಡನೆ ವಿಧಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ನಿವೃತ್ತ ಮೀಸಲು ಪೊಲೀಸ್ ಸಹಾಯಕ ಉಪ ನಿರೀಕ್ಷಕ ಕೆ.ಸುಕುಮಾರ್ ಅವರನ್ನು ರಾಜ್ಯ ಗುಪ್ತವಾರ್ತೆ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಿಸಲು ಅನುಮತಿ ನೀಡಲಾಗಿದೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕು ಮಿನಿ ವಿಧಾನ ಸೌಧ ಕಟ್ಟಡ ಕಾಮಗಾರಿಯ 12.48 ಕೋಟಿ ರೂ. ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ.

ಬೆಂಗಳೂರಿನ ಮಾತಾ ಅಮೃತಾನಂದಮಯಿ ಮಠಕ್ಕೆ ಮಂಜೂರು ಮಾಡಿರುವ ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಪೂರ್ವ ತಾಲೂಕು ವರ್ತೂರು ಹೋಬಳಿ, ಕಸವನಹಳ್ಳಿ ಗ್ರಾಮದ ಸರ್ವೆ ನಂ.26 ಮತ್ತು 27ರಲ್ಲಿ ಒಟ್ಟು 22 ಎಕರೆ ಜಮೀನಿನ ಉಪಯೋಗದ ಉದ್ದೇಶಗಳನ್ನು ಮಾರ್ಪಡಿಸಿರುವ ಸರಕಾರಿ ಆದೇಶವನ್ನು ಮರು ಪರಿಶೀಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ 9 ಲಕ್ಷ ಟನ್ ಪಾರಂಪರಿಕ ತ್ಯಾಜ್ಯ ನಿರ್ವಹಣೆಗಾಗಿ ಸಲ್ಲಿಸಿರುವ 73.73 ಕೋಟಿ ರೂ.ಗಳ ವಿಸ್ತೃತ ಯೋಜನಾ ವರದಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಸಚಿವ ಆನಂದ್ ಸಿಂಗ್ ಗೈರು 

ಸಚಿವ ಸಂಪುಟ ಸಭೆಗೆ ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಸಚಿವ ಆನಂದ್ ಸಿಂಗ್ ಹಾಗೂ ಉಪಮುಖ್ಯಮಂತ್ರಿ ಹುದ್ದೆ ದಕ್ಕದ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಗೈರು ಹಾಜರಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News