×
Ad

ಜೈಲಿನಿಂದ ಬಿಡುಗಡೆಗೊಂಡ ಮಾಜಿ ಸಚಿವ ವಿನಯ್ ಕುಲಕರ್ಣಿ

Update: 2021-08-21 11:56 IST

ಬೆಳಗಾವಿ, ಆ.21: ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಹಿಂಡಲಗಾ ಜೈಲಿನಲ್ಲಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಶನಿವಾರ ಮಧ್ಯಾಹ್ನ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ಹಿಂಡಲಗಾ ಜೈಲಿನ ಮುಂಭಾಗದಲ್ಲಿ ಅವರ ಸಾವಿರಾರು ಅಭಿಮಾನಿಗಳು ಬೃಹತ್ ಸೇಬುಹಣ್ಣಿನ ಹಾರ, ಹೂವಿನ ಹಾರಗಳೊಂದಿಗೆ ನೆಚ್ಚಿನ ನಾಯಕನನ್ನು ಬರಮಾಡಿಕೊಂಡರು ನೆರೆದಿದ್ದರು. ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸುತ್ತಿದ್ದಾರೆ. ಕೋವಿಡ್ ಭೀತಿಯ ನಡುವೆಯೂ ಸುರಕ್ಷಿತ ಅಂತರವನ್ನೂ ಮರೆತು ತಮ್ಮ ನಾಯಕನನ್ನು ಬರಮಾಡಿಕೊಂಡರು.

ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಪಂ ಸದಸ್ಯರಾಗಿದ್ದ ಯೋಗೇಶ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐಯಿಂದ ಬಂಧಿಸಲ್ಪಟ್ಟಿದ್ದ ವಿನಯ್ ಕುಲಕರ್ಣಿ ಕಳೆದ 9 ತಿಂಗಳಿನಿಂದ ಹಿಂಡಲಗಾ ಕಾರಾಗೃಹದಲ್ಲಿದ್ದರು. ಆ.19ರಂದು ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಜಾಮೀನು ಲಭಿಸಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಜಾಮೀನು ಆದೇಶ ಪ್ರತಿ ಹಿಂಡಲಗಾ ಜೈಲು ಅಧಿಕಾರಿಗಳಿಗೆ ತಲುಪದ ಹಿನ್ನೆಲೆಯಲ್ಲಿ ವಿನಯ್ ಅವರ ಬಿಡುಗೆ ವಿಳಂಬವಾಗಿತ್ತು.  

ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿರುವ ವಿನಯ ಕುಲಕರ್ಣಿ ಒಡೆತನದ ಜಿಮ್​ನಲ್ಲಿ 2016ರ ಜೂನ್ 15ರಂದು ಯೋಗೇಶ್​ ಗೌಡ ಅವರ ಕೊಲೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ 2020ರ ನವೆಂಬರ್ 5ರಂದು ವಿನಯ್ ಕುಲಕರ್ಣಿ ಅವರನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News