×
Ad

ಸಿಎಂ ಬೊಮ್ಮಾಯಿ ಬಳ್ಳಾರಿಗೆ ಬಂದರೂ ಭೇಟಿಗೆ ತೆರಳದ ಸಚಿವ ಆನಂದ್ ಸಿಂಗ್

Update: 2021-08-21 17:38 IST
ಬಸವರಾಜ ಬೊಮ್ಮಾಯಿ / ಆನಂದ್ ಸಿಂಗ್

ಬಳ್ಳಾರಿ, ಆ. 21: "ಇಲ್ಲಿನ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಆಗಮಿಸಿದರೂ ಅವರ ಭೇಟಿಗೆ ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆನಂದ್ ಸಿಂಗ್ ಆಗಮಿಸದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ವಿಜಯಪುರ ಜಿಲ್ಲೆಯ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಂದಾಲ್‍ಗೆ ಭೇಟಿ ನೀಡಿದ್ದರು. ನಂತರ ಹೆಲಿಕಾಪ್ಟರ್ ಮೂಲಕ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ತೆರಳಿದರು.

ನಿನ್ನೆ ಸಂಜೆಯಷ್ಟೇ ಹೊಸಪೇಟೆಗೆ ಬಂದಿಳಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನು ಸಚಿವ ಆನಂದ್ ಸಿಂಗ್ ಸ್ವಾಗತಿಸಿದ್ದರು. ಆದರೆ, ಇಂದು ಸಿಎಂ ಬೊಮ್ಮಾಯಿ ಅವರು ಜಿಂದಾಲ್‍ಗೆ ಭೇಟಿ ನೀಡಿದರೂ ಅವರನ್ನು ಭೇಟಿಯಾಗಿಲ್ಲ.

ಎರಡು ದಿನಗಳ ಹಿಂದೆ ನಡೆದ ಸಚಿವ ಸಂಪುಟ ಸಭೆಗೂ ಸಚಿವ ಆನಂದ ಸಿಂಗ್ ಗೈರು ಹಾಜರಾಗಿದ್ದರು. ಪ್ರಭಾವಿ ಖಾತೆ ಸಿಗದಿರುವುದಕ್ಕೆ ಆನಂದ್ ಸಿಂಗ್ ಮುನಿಸುಕೊಂಡಿದ್ದು, ಅದು ಇನ್ನೂ ಶಮನವಾಗಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಹೀಗಾಗಿ ಇಂದು ಮುಖ್ಯಮಂತ್ರಿ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದರೂ ಅವರನ್ನು ಭೇಟಿ ಮಾಡಿಲ್ಲ ಎನ್ನಲಾಗಿದೆ.

ಸಚಿವ ಆನಂದ್ ಸಿಂಗ್ ಅವರು ಆಗಮಿಸುತ್ತಾರೆಂದು ಕೆಲ ಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾದು ಕುಳಿತಿದ್ದರು. ಆದರೆ, ಎಷ್ಟೇ ಹೊತ್ತು ಕಾದರೂ ಆನಂದ್ ಸಿಂಗ್, ಸಿಎಂ ಭೇಟಿಗೆ ಆಗಮಿಸಲಿಲ್ಲ. ಹೀಗಾಗಿ ಸಿಎಂ ಬೊಮ್ಮಾಯಿ ಜಿಂದಾಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಆಲಮಟ್ಟಿ ಅಣೆಕಟ್ಟಿಗೆ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News