ಮಾಸ್ಕ್ ಧರಿಸದವರಿಗೆ ದಂಡದ ಮೊತ್ತ ರಾಜ್ಯದಲ್ಲಿಯೇ ಕಡಿಮೆ: ಕಂದಾಯ ಸಚಿವ ಆರ್.ಅಶೋಕ್
ಬೆಂಗಳೂರು, ಆ. 21: `ರಾಜಕಾರಣಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಎಲ್ಲರೂ ಕೋವಿಡ್ ಸೋಂಕಿನಿಂದ ರಕ್ಷಣೆ ಮಾಡಿಕೊಳ್ಳಲು ಮಾಸ್ಕ್ ಹಾಕುವುದು ಕಡ್ಡಾಯ. ಕೋವಿಡ್ ನಿಯಮ ಉಲ್ಲಂಘನೆ ಮಾಡಿದರೆ ದಂಡ ಕಟ್ಟಬೇಕಾಗುತ್ತದೆ. ಹೊಸದಿಲ್ಲಿಯಲ್ಲಿ 5 ಸಾವಿರ ರೂ.ದಂಡ ಹಾಕಲಾಗುತ್ತದೆ. ರಾಜ್ಯದಲ್ಲಿಯೇ ಮಾಸ್ಕ್ ಧರಿಸದವರಿಗೆ ದಂಡದ ಮೊತ್ತ ಕಡಿಮೆ ಇದೆ. ಎಲ್ಲರೂ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು' ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
`ರಾಜ್ಯದಲ್ಲಿ ಆ.23ರಿಂದ 9ನೆ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಶಾಲೆಗಳನ್ನು ತೆರೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಆದೇಶ ಹೊರಡಿಸಿದ್ದು, ತರಗತಿ ಕೊಠಡಿಗಳಲ್ಲಿ ಎಷ್ಟು ವಿದ್ಯಾರ್ಥಿಗಳು ಇರಬೇಕೆಂದು ನಿರ್ಧಾರವಾಗಿದೆ. ಕೋವಿಡ್ ಸೋಂಕು ಹರಡದಂತೆ ಕ್ರಮ ಕೈಗೊಳ್ಳಲಾಗಿದೆ' ಎಂದು ಅವರು ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಬೆಂಗಳೂರಿನಲ್ಲಿ ಕಾರ್ಪೋರೇಷನ್, ಸರಕಾರಿ ಶಾಲೆ ತೆರೆಯಬೇಕು. ಆದರೆ, ತರಗತಿಯಲ್ಲಿ ಹೆಚ್ಚು ಮಕ್ಕಳಿರಬಾರದು ಎಂದು ಸೂಚಿಸಲಾಗಿದೆ. ಸದ್ಯಕ್ಕೆ 9 ಮತ್ತು 10 ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ಆರಂಭಿಸಿ ಪ್ರಾಯೋಗಿಕವಾಗಿ ನೋಡಿಕೊಂಡು, ನಂತರ ಹಂತ-ಹಂತವಾಗಿ 7 ಮತ್ತು 8 ನೇ ತರಗತಿಗಳನ್ನು ತೆರೆಯಲಾಗುವುದು' ಎಂದರು.