ನಕಲಿ ಕೋವಿಡ್ ವರದಿ ತಂದರೆ ಜೈಲುಗಟ್ಟಿ: ಅಧಿಕಾರಿಗಳಿಗೆ ಸೂಚಿಸಿದ ಸಚಿವ ಎಸ್.ಟಿ.ಸೋಮಶೇಖರ್
ಗುಂಡ್ಲುಪೇಟೆ: ಕೇರಳದಿಂದ ನಕಲಿ ಕೋವಿಡ್ ನೆಗೆಟಿವ್ ವರದಿ ತರುವವರ ಮೇಲೆ ಪ್ರಕರಣ ದಾಖಲು ಮಾಡಿ ಜೈಲುಗಟ್ಟಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಕೇರಳ ಗಡಿ ಭಾಗ ಮೂಲೆ ಹೊಳೆ ಚೆಕ್ ಪೋಸ್ಟ್ ಗೆ ಶನಿವಾರ ಭೇಟಿ ನೀಡಿ ಮಾಹಿತಿ ಪಡೆದು ಮಾತನಾಡಿದರು.
ಕೇರಳ ಮತ್ತು ತಮಿಳುನಾಡಿನಿಂದ ರಾಜ್ಯಕ್ಕೆ ಬರುವವರು ನಕಲಿ ರಿಪೋರ್ಟ್ ತಂದರೇ ಅಂತವರ ವಾಹನ ಜಪ್ತಿ ಮಾಡಿ ಕೇಸ್ ದಾಖಲಿಸಬೇಕು. ಈ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿ ಅವರಿಗೆ ಮಾಹಿತಿ ತಿಳಿಸಿ ಎಂದು ಸೂಚಿಸಿದ ಸಚಿವರು, ನಕಲಿ ಆರ್ ಟಿಪಿಸಿಆರ್ ರಿಪೋರ್ಟ್ ತರುತ್ತಿರುವ ಬಗ್ಗೆ ಕೇರಳದ ವಯನಾಡ್ ಜಿಲ್ಲಾಧಿಕಾರಿಗೆ ಪತ್ರ ಬರೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ರವಿ ಅವರಿಗೆ ತಿಳಿಸಿದರು.
ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಅವಕಾಶ ನೀಡಬೇಕು. ಉಳಿದಂತೆ ಯಾವುದೇ ಕಾರಣಕ್ಕೂ ಪ್ರವೇಶ ನೀಡಬಾರದು ಎಂದು ಸಿಬ್ಬಂದಿಗಳಿಗೆ ಸೂಚಿಸಿದರು
ಮೈಸೂರು ಮೇಯರ್ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟು ಕೊಡುವಂತೆ ಸಾ.ರಾ.ಮಹೇಶ್ ಅವರು ಕೇಳಿದ್ದಾರೆ .ನಾನು ಮೂರು ಷರತ್ತು ಹಾಕಿದ್ದೇನೆ. ಅವರು ಸಹ ಷರತ್ತು ಹಾಕಿದ್ದಾರೆ. ಸಾ.ರಾ ಮಹೇಶ್ ಅವರು ಅವರ ಹೈಕಮಾಂಡ್ ಜೊತೆ ಮಾತನಾಡಲಿದ್ದಾರೆ. ಈ ವಿಚಾರವಾಗಿ ನಾನು ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಮಾತನಾಡುವುದಿಲ್ಲ ಎಂದು ಹೇಳಿದರು.
ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ, ಹಾಗೂ ಮೈಸೂರು ಬಿಜೆಪಿ ನಗರಾಧ್ಯಕ್ಷ ಅವರು ಸಹ ಹೆಚ್.ಡಿ.ಕುಮಾರಸ್ವಾಮಿ ಜೊತೆ ಮಾತನಾಡಲಿದ್ದಾರೆ. ನಾಳೆ ಸಂಜೆ ಅಥವಾ ನಾಳಿದ್ದು ಮೈಸೂರು ಮೇಯರ್ ಯಾರೆಂದು ತಿಳಿಯಲಿದೆ ಎಂದು ಹೇಳಿದರು.
ಸಚಿವ ಆನಂದ್ ಸಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಆನಂದ್ ಸಿಂಗ್ ಅವರಿಗೆ ಸಿಎಂ ಅವರು ಏನೆಲ್ಲಾ ಹೇಳಬೇಕೊ ಅದೆಲ್ಲವನ್ನೂ ಎರಡು ದಿನಗಳ ಹಿಂದೆಯೇ ಹೇಳಿದ್ದಾರೆ. ಇನ್ನೊಂದು ವಾರದ ಒಳಗೆ ಎಲ್ಲವೂ ಸರಿಹೋಗಲಿದೆ ಎಂದು ಹೇಳಿದರು.