'ಪಿಕ್ಚರ್ ಅಭೀ ಬಾಕಿ ಹೈ' ಎಂದ ಸಚಿವ ಆನಂದ್ ಸಿಂಗ್ ಹೇಳಿಕೆಗೆ ಶಾಸಕ ರಾಜೂಗೌಡ ಪ್ರತಿಕ್ರಿಯಿಸಿದ್ದು ಹೀಗೆ...
ಬೆಂಗಳೂರು, ಆ. 21: ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಸಚಿವ ಆನಂದ್ ಸಿಂಗ್ 'ಪಿಕ್ಚರ್ ಅಭೀ ಬಾಕಿ ಹೈ' ಎಂದು ಹೇಳಿದ್ದಾರೆ. ಆದರೆ, 'ಥಿಯೇಟರ್ ಬಂದ್ ಹೈ, ಪಿಚ್ಚರ್ ಕೈಸಾ ಚಾಲೂ ಹೋತಾ ಹೈ' ಎಂದು ಶಾಸಕ ರಾಜೂಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಪಿಕ್ಚರ್ ಅಭೀ ಬಾಕಿ ಹೈ ಎಂದಿದ್ದೀಯಲ್ಲಣ್ಣ, ಕೊರೋನ ಇರುವುದರಿಂದ ಥೀಯೇಟರ್ ಬಂದ್ ಇದ್ದಾವೆ. ನೀನು ಎಲ್ಲಿ ಪಿಕ್ಚರ್ ಆರಂಭಿಸುತ್ತಿಯಣ್ಣ ಎಂದು ಹೀಗೆ ಮಾತನಾಡುತ್ತಿರುವಾಗ ಹಾಸ್ಯ ಮಾಡಿದ್ದೆವು' ಎಂದು ಆನಂದ್ ಸಿಂಗ್ ಮತ್ತು ತಮ್ಮ ನಡುವಿನ ಚರ್ಚೆಯ ಬಗ್ಗೆ ತಿಳಿಸಿದರು.
"ಸಚಿವ ಆನಂದ್ ಸಿಂಗ್ ಅವರಿಗೆ ಖಾತೆ ವಿಚಾರದಲ್ಲಿ ಅಸಮಾಧಾನ ಇರುವುದು ನಿಜ. ಆದರೆ, ನಾವೆಲ್ಲ ಸ್ನೇಹಿತರು ಅವರಿಗೆ ಮಾತಾಡಿದ್ದೇವೆ. ಈಗ ಸಮಾಧಾನ ಆಗಿದ್ದಾರೆ. ಅವರ ಕ್ಷೇತ್ರದಲ್ಲಿ ಸ್ವಾತಂತ್ರ್ಯದ ಧ್ವಜಾರೋಹಣ ಮಾಡಿದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಆಗಮಿಸಿದಾಗಲೂ ಭೇಟಿ ಮಾಡಿದ್ದರು. ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಬರುತ್ತಾರೆ. ನಾವೂ ಸಚಿವ ಸ್ಥಾನದಲ್ಲಿ ಮುಂದುವರೆಯುವಂತೆ ಸೂಚಿಸಿದ್ದೇವೆ ಎಂದರು.
"ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಹಂಚಿಕೆ ಮಾಡಿದ್ದು, ಆ ಖಾತೆಯ ಬಗ್ಗೆ ಅವರಿಗೆ ಅಸಮಾಧಾನ ಇರುವುದು ಸತ್ಯ. ಆದರೆ, ಹೈಕಮಾಂಡ್ ಬದಲಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಚರ್ಚಿಸಿ ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ಶೀಘ್ರವೇ ಎಲ್ಲರೂ ಸರಿಯಾಗಲಿದೆ" ಎಂದು ರಾಜೂಗೌಡ ಇದೇ ವೇಳೆ ಸ್ಪಷ್ಟಪಡಿಸಿದರು.