ಯುವ ಕಾಂಗ್ರೆಸ್‍ನಿಂದ ಸಿ.ಟಿ.ರವಿ ಮನೆಗೆ ಮುತ್ತಿಗೆ ಯತ್ನ; ಬಿಜೆಪಿಯಿಂದ ಪ್ರತಿ ಧರಣಿ
ಚಿಕ್ಕಮಗಳೂರು, ಆ.21: ದೇಶದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್‍ನ ಜಿಲ್ಲಾ ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ನಗರದಲ್ಲಿರುವ ಶಾಸಕ ಸಿ.ಟಿ.ರವಿ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲು ಮುಂದಾಗಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರು ಕಾಂಗ್ರೆಸ್ ಮುಖಂಡರ ಈ ಮುತ್ತಿಗೆಯನ್ನು ತಡೆಯಲು ರಸ್ತೆ ಮಧ್ಯೆ ಧರಣಿ ನಡೆಸಿದ್ದರಿಂದ ನಗರದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
'ಇಂದಿರಾ ಕ್ಯಾಂಟಿನ್' ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಅವರು ಇತ್ತೀಚೆಗೆ ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಹಾಗೂ ನೆಹರು ಅವರ ಬಗ್ಗೆ ಅವಹೇಳನಕಾರಿ ನೀಡುತ್ತಿರುವುದನ್ನು ಖಂಡಿಸಿ ಸಂಸದ ಧ್ರುವನಾರಾಯಣ್ ಶುಕ್ರವಾರ ಆರೆಸ್ಸೆಸ್ ಸಂಘಟನೆಯನ್ನು ತಾಲಿಬಾನಿಗಳಿಗೆ ಹೋಲಿಕೆ ಮಾಡಿ ಹೇಳಿದ್ದರು. ಇದನ್ನು ಖಂಡಿಸಿ ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಹಾಗೂ ಸಂಘಪರಿವಾರದ ಮುಖಂಡರು ಶುಕ್ರವಾರ ರಾತ್ರಿ ಪತ್ರಿಕಾ ಹೇಳಿಕೆ ನೀಡಿ, ನಗರದಲ್ಲಿರುವ ಕಾಂಗ್ರೆಸ್ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿ, ಗೋಮೂತ್ರ ಸಿಂಪಡಿಸಿ 'ಶುದ್ಧೀಕರಣ' ಮಾಡುವುದಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಯುವ ಕಾಂಗ್ರೆಸ್ ಮುಖಂಡರೂ ಸಿ.ಟಿ.ರವಿ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲು ನಿರ್ಣಯಿಸಿತ್ತು ಎಂದು ತಿಳಿದು ಬಂದಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪೊಲೀಸರು ನಗರದಲ್ಲಿ ಶನಿವಾರ ಎರಡೂ ಕಡೆಯವರ ಪ್ರತಿಭಟನೆಗೆ ಪ್ರತ್ಯೇಕ ಸಮಯ, ಸ್ಥಳ ನಿಗದಿ ಮಾಡಿ ಪ್ರತಿಭಟನೆಗೆ ಅವಕಾಶ ನೀಡಿದ್ದು, ಅಹಿತಕರ ಘಟನೆಗಳನ್ನು ಹತ್ತಿಕ್ಕಲು ಶನಿವಾರ ಬೆಳಗ್ಗೆಯಿಂದಲೇ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಶನಿವಾರ ಬೆಳಗ್ಗೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಭೆ ನಡೆಸುತ್ತಿದ್ದ ವೇಳೆ ಅತ್ತ ನಗರದ ಬಸವನಹಳ್ಳಿ ರಸ್ತೆಯಲ್ಲಿರುವ ಸಿ.ಟಿ. ರವಿ ಮನೆ ಎದುರು ಬಿಜೆಪಿ ಹಾಗೂ ಸಂಘಪರಿವಾರದ ಮುಖಂಡರು ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಬೀಡುಬಿಟ್ಟಿದ್ದರು. ಈ ವೇಳೆ ಪೊಲೀಸರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ನೀಡದೇ ನಿಗದಿತ ಸ್ಥಳದಲ್ಲಿ ಪ್ರತಿಭಟನೆ ಮಾಡುವಂತೆ ಎರಡೂ ಕಡೆಯವರಿಗೆ ಸೂಚನೆ ನೀಡಿದ್ದರು.
ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದ ಸುಮಾರು ಯುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ದಿಢೀರ್ ರಸ್ತೆಗಿಳಿದು ಸಿ.ಟಿ.ರವಿ ಮನೆಗೆ ಮುತ್ತಿಗೆ ಹಾಕಲು ಪ್ರತಿಭಟನಾ ಮೆರವಣಿಗೆ ನಡೆಸಿದರು. ಭಾರೀ ಸಂಖ್ಯೆಯಲ್ಲಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ತೆರಳುತ್ತಿದ್ದಂತೆ ಪೊಲೀಸರು ಬ್ಯಾರಿಕೇಡ್‍ಗಳನ್ನು ರಸ್ತೆಗಿಟ್ಟು ಮುಂದೆ ಹೋಗದಂತೆ ತಡೆ ಹಾಕಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಡಲು ಒಪ್ಪದಿದ್ದಾಗ ಎಸ್ಪಿ ಎಂ.ಎಚ್.ಅಕ್ಷಯ್ ಪ್ರತಿಭಟನಾಕಾರರನ್ನು ಬಂಧಿಸಲು ಸೂಚನೆ ನೀಡಿದ್ದರಿಂದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದೊಯ್ದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ್, ಮುಖಂಡರಾದ ರಾಯಲ್ ಶರೀಫ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ವಿಪ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಬ್ಲಾಕ್‍ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಮಾಡಬೇಕು ಎಂದು ಸಿಎಂ ಬಳಿ ಮನವಿ ಮಾಡಿರುವ ಸಿ.ಟಿ.ರವಿ ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಹೆಸರಿನಲ್ಲಿ ಹುಕ್ಕಾ ಬಾರ್ ತೆರೆಯಲಿ ಎಂದು ಹೇಳಿ ದೇಶಕ್ಕೆ ಹಾಗೂ ಮಾಜಿ ಪ್ರಧಾನಿಗಳಿಗೆ ಅಪಮಾನ ಮಾಡುತ್ತಿದ್ದಾರೆ. ಸಿ.ಟಿ.ರವಿ ಶಾಸಕರಾದ ಮೇಲೆ ಸರಕಾರಿ ಅನುದಾನವನ್ನು ಕೊಳ್ಳೆ ಹೊಡೆದು 'ಕೋಟಿ ರವಿ' ಎಂದು ಹೆಸರು ಮಾಡಿದ್ದಾರೆ. ಸಿ.ಟಿ.ರವಿಗೆ ಅಗತ್ಯವಿದ್ದಲ್ಲಿ ತಮ್ಮ ಮನೆಯಲ್ಲಿ ಹುಕ್ಕಾ ಬಾರ್ ಮಾಡಿಕೊಳ್ಳಲಿ. ದೇಶದ ಮಾಜಿ ಪ್ರಧಾನಿಗಳ ಬಗ್ಗೆ ಮಾತನಾಡುವಾಗಿ ನಾಲಿಗೆ ಮೇಲೆ ಹಿಡಿತ ಇರಬೇಕು. ಸಿ.ಟಿ.ರವಿಗೆ ಬುದ್ಧಿ ಕಲಿಸಲು ಅವರ ಮನೆಗೆ ಮುತ್ತಿಗೆ ಹಾಕಿ ಕ್ಷಮೆ ಯಾಚನೆ ಮಾಡುವಂತೆ ಆಗ್ರಹಿಸುವ ಕಾರ್ಯಕ್ರಮವನ್ನು ಯುವ ಕಾಂಗ್ರೆಸ್ ಹಮ್ಮಿಕೊಂಡಿತ್ತು. ಆದರೆ ಜಿಲ್ಲಾ ಪೊಲೀಸ್ ಇಲಾಖೆ ಸಿ.ಟಿ.ರವಿ ಕೈಗೊಂಬೆಯಾಗಿರುವುದರಿಂದ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಿದ್ದಾರೆ.
- ಎಚ್.ಪಿ.ಮಂಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಯುವ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾದ ಸುದ್ದಿ ತಿಳಿಯುತ್ತಿದ್ದಂತೆ ಅತ್ತ ಸಿ.ಟಿ.ರವಿ ಮನೆ ಬಳಿ ಇದ್ದ ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರು ಬಿಜೆಪಿ ಮುಖಂಡರಾದ ಎಚ್.ಡಿ.ತಮ್ಮಯ್ಯ, ಜಯಣ್ಣ ನೆಟ್ಟೆಕೆರೆಹಳ್ಳಿ, ಸಿ.ಆನಂದ್, ಪುಷ್ಪರಾಜ್, ರಾಜ್‍ಶೇಖರ್, ವರಸಿದ್ದಿವೇಣುಗೋಪಾಲ್, ಸಂತೋಷ್ ಕೋಟ್ಯಾನ್, ಸಂದೀಪ್ ನೇತೃತ್ವದಲ್ಲಿ ಬಸವನಹಳ್ಳಿ ರಸ್ತೆ ತಡೆ ಮಾಡುವ ಮೂಲಕ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಕಾಂಗ್ರೆಸ್ ಪಕ್ಷದವರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ ಅದು ವೈಯಕ್ತಿಕವಾಗಿರಬಾರದು. ಸಿ.ಟಿ.ರವಿ ಮನೆಗೆ ಮುತ್ತಿಗೆ ಹಾಕಿದರೆ ನೋಡಿಕೊಂಡು ಸುಮ್ಮನಿರಲ್ಲ. ಇದಕ್ಕೆ ಪೊಲೀಸರು ಅವಕಾಶ ನೀಡಬಾರದು. ಅವಕಾಶ ನೀಡಿದಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರ ಪ್ರತಿಭಟನೆಯಿಂದಾಗಿ ನಗರದಲ್ಲಿ ಕೆಲ ಹೊತ್ತು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.