ಮಳವಳ್ಳಿ: ಪತ್ನಿಯ ಹತ್ಯೆಗೈದು ಪಕ್ಕದ ಜಮೀನಿನಲ್ಲಿ ಹೂತುಹಾಕಿ ಪರಾರಿಯಾದ ಪತಿ
ಮಳವಳ್ಳಿ: ಶೀಲ ಶಂಕಿಸಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಮೃತದೇಹವನ್ನು ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಹೂತುಹಾಕಿ ಪರಾರಿಯಾಗಿರುವ ಕೃತ್ಯ ತಾಲೂಕಿನ ಕಲ್ಲುವೀರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವರಾಜು ಎಂಬಾತ ತನ್ನ ಪತ್ನಿ ರಾಣಿ ಎಂಬಾಕೆಯನ್ನು ಮನೆಯಲ್ಲಿ ಶುಕ್ರವಾರ ರಾತ್ರಿ ಚಾಕುವಿನಿಂದ ಹೊಟ್ಟೆಗೆ ಇರಿದು, ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿ ತಡರಾತ್ರಿ ಪಕ್ಕದ ಸತೀಶ್ ಎಂಬವರ ಜಮೀನಿಲ್ಲಿ ಮೃತದೇಹವನ್ನು ಹೂತುಹಾಕಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಶನಿವಾರ ಬೆಳಗ್ಗೆ ಸತೀಶ್ ತನ್ನ ಜಮೀನಿನಲ್ಲಿ ರಕ್ತ ಚೆಲ್ಲಾಡಿರುವುದು, ಸ್ಥಳದಲ್ಲಿ ಮೃತದೇಹವೊಂದನ್ನು ಹೂತಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ಪೊಲೀಸರು, ಹೂತುಹಾಕಿರುವ ಮೃತದೇಹವನ್ನು ಹೊರತೆಗೆದು ಪ್ರಕರಣ ದಾಖಲಿಸಿಕೊಂಡು ಅರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಸಿಪಿಐ ಡಿ.ಪಿ.ಧನರಾಜ್, ಪಿಎಸ್ಸೈ ಡಿ.ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.