ತುಮಕೂರು: ಶ್ರೀಗಂಧದ ಮರ ಕಳವಿಗೆ ಯತ್ನಿಸಿದ ಆರೋಪಿಗಳ ಮೇಲೆ ಫೈರಿಂಗ್; ಓರ್ವ ಸಾವು

Update: 2021-08-21 14:39 GMT

ಕುಣಿಗಲ್: ಶ್ರೀಗಂಧದ ಮರ ಕಳವು ಮಾಡುವ ವೇಳೆ ಬಂಧಿಸಲು ಯತ್ನಿಸಿದ ಅರಣ್ಯ ಸಿಬ್ಬಂದಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆನ್ನಲಾದ ಆರೋಪಿಗಳ ಮೇಲೆ ಫೈರಿಂಗ್ ನಡೆಸಿದ್ದು, ಈ ವೇಳೆ ಓರ್ವ ಆರೋಪಿ ಮೃತಪಟ್ಟಿದ್ದಾನೆ.

ಹುಲಿಯೂರುದುರ್ಗ ಕಂಪ್ಲಾಪುರ ಮೀಸಲು ಅರಣ್ಯದಲ್ಲಿ ಪ್ರದೇಶದಲ್ಲಿ ಶ್ರೀಗಂಧ  ಕಳವು ಮಾಡಲು ಯತ್ನಿಸಿದ ಆರೋಪಿಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯು ಸುತ್ತುವರೆದಾಗ ಮೂವರು ಪರಾರಿಯಾಗಿದ್ದು, ಓರ್ವ ಆರೋಪಿ ಮಚ್ಚಿನಿಂದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಹಲ್ಲೆ ಮಾಡಿದಾಗ ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಕಾಲಿಗೆ ಗುಂಡು ಹಾರಿಸಿದಾಗ ಪಕ್ಕೆಗೆ ತಗುಲಿ ಸ್ಥಳದಲ್ಲೇ ಆರೋಪಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. 

ಮೃತಪಟ್ಟ ಆರೋಪಿಯ ಹೆಸರು, ವಿಳಾಸ ತಿಳಿದು ಬಂದಿಲ್ಲ.

ತಾಲೂಕಿನ ಹುಲಿಯೂರುದುರ್ಗ  ಅರಣ್ಯ ಪ್ರದೇಶವಾದ  ಕೊಡವತ್ತಿ  ಸರ್ವೆ ನಂಬರ್ 84ರ ಕಂಪ್ಲಾಪುರ  ಮೀಸಲು  ಅರಣ್ಯ ಪ್ರದೇಶದಲ್ಲಿ  ಬೆಳಗ್ಗೆ 4 ಮಂದಿಯ ತಂಡ ಶ್ರೀಗಂಧದ ಮರಗಳನ್ನು ಅಕ್ರಮವಾಗಿ ಕಡಿಯುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಹುಲಿಯೂರುದುರ್ಗ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಸಿಬ್ಬಂದಿ ಸುತ್ತುವರಿದು ನಾಲ್ಕು ಮಂದಿ ಆರೋಪಿಗಳಿಗೆ ಶರಣಾಗುವಂತೆ ತಿಳಿಸಿದರು. ಆರೋಪಿಗಳಲ್ಲಿ ಮೂವರು ಪರಾರಿಯಾದರು. ಓರ್ವ ಆರೋಪಿ ಹಿಡಿಯಲು ಅರಣ್ಯ ಸಿಬ್ಬಂದಿಯ ಮೇಲೆ ಮಚ್ಚಿನಿಂದ ಕೈಗೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ  ಡಿ ಆರ್ ಎಫ್ ಮಹೇಶ್ ಎಂಬುವರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಆರೋಪಿ ಕದಲದೆ ಇದ್ದಾಗ ಕಾಲಿಗೆ ಗುಂಡು ಹಾರಿಸಿದಾಗ ಆತನ ಪಕ್ಕೆಗೆ ಗುಂಡು ತಗಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ರಮೇಶ್, ಜಿಲ್ಲಾ  ಎಸಿಎಫ್ ರಾಜೇಂದ್ರ, ಡಿವೈಎಸ್ಪಿ ರಮೇಶ್.  ಸಿ ಪಿ ಐ ಗುರುಪ್ರಸಾದ್. ಹುಲಿಯೂರುದುರ್ಗ ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್, ಪಿಎಸ್ಐ  ಚೇತನ್ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂಬಂಧ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News