ರೈತರ ಮಕ್ಕಳಿಗೆ ವಿಶೇಷ ಶಿಷ್ಯವೇತನ ಯೋಜನೆ: ಸಿಎಂ ಬಸವರಾಜ ಬೊಮ್ಮಾಯಿ

Update: 2021-08-21 15:25 GMT

ಬಾಗಲಕೋಟೆ: ನಾಡಿಗೆ ಅನ್ನ ನೀಡುವ ರೈತರ ಮಕ್ಕಳ ಶಿಕ್ಷಣಕ್ಕಾಗಿ ಪದವಿ ಪೂರ್ವದಿಂದ ಸ್ನಾತಕೋತ್ತರವರೆಗೆ ವಿಶೇಷ ಶಿಷ್ಯವೇತನ ನೀಡುವ ಯೋಜನೆ ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶನಿವಾರ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರೀ ಸಾಗರದ ಕೃಷ್ಣೆಯ ಜಲಧಿಗೆ ಬಾಗಿನ ಅರ್ಪಿಸಿದ ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಶಿಷ್ಯ ವೇತನ ಯೋಜನೆಯಿಂದ ರಾಜ್ಯದ 18 ಲಕ್ಷ ರೈತರ ಮಕ್ಕಳಿಗೆ ಅನುಕೂಲವಾಗಿದೆ. ಇದಕ್ಕಾಗಿ ಸರಕಾರ ಒಂದು ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಿದೆ ಎಂದರು.

ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ 5 ರಂದು ಎಲ್ಲ ಜಿಲ್ಲೆಯ 5 ಜನ ರೈತರ ಮಕ್ಕಳನ್ನು ಕರೆಯಿಸಿ ಶಿಷ್ಯವೇತನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ ಮುಖ್ಯಮಂತ್ರಿ, ರೈತಾಪಿ ವರ್ಗ ಹವಾಮಾನದ ವೈಪರಿತ್ಯದ ನಡುವೆ ಬದುಕುತ್ತಿರುವುದರಿಂದ ಕೃಷಿಯೇ ಅವರ ಜೀವನಾಧಾರಿತವಾಗಿದ್ದು, ಗ್ರಾಮದ ಹಲವಾರು ಮನೆಗಳಲ್ಲಿ ಕೆಲವು ಮನೆಗಳು ಮಾತ್ರ ಸುಸಜ್ಜಿತವಾಗಿರುವುದನ್ನು ಕಾಣುತ್ತಿದ್ದೇವೆ ಎಂದರು.

ಅಂತಹ ಮನೆಯಲ್ಲಿ ಒಬ್ಬರಾದರೂ ಶಿಕ್ಷಣ ಹಾಗೂ ಕೌಶಲ್ಯದಿಂದ ಪ್ರಗತಿ ಹೊಂದಿರುತ್ತಾರೆ. ಆದುದರಿಂದ, ಆರ್ಥಿಕ ಪ್ರಗತಿಗೆ ಶಿಕ್ಷಣ, ಕೌಶಲ್ಯ ಮಹತ್ವವಾಗಿದೆ. ಬಡವರಿಗೆ ಸಾಮಾಜಿಕ ಭದ್ರತೆ ಯೋಜನೆಯಡಿ ಸಂಧ್ಯಾ ಸುರಕ್ಷಾ ಮತ್ತು ವಿಕಲಚೇತನರಿಗೆ ನೀಡುವ ಮಾಶಾಸನದ ಮೊತ್ತವನ್ನು ಹೆಚ್ಚಿಸಲಾಗಿದ್ದು, ಬರುವ ಸೆಪ್ಟೆಂಬರ್‍ದಿಂದ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ವಿಜಯಪುರ-ಬಾಗಲಕೋಟೆ ಜಿಲ್ಲೆಗಳು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಂತೆ ರಾಜ್ಯದ ಗಡಿ ಅಂಚಿನಲ್ಲಿರುವ ಎಲ್ಲ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಅಮೃತ ಯೋಜನೆ ಜಾರಿಗೊಳಿಸಲು ಕ್ಯಾಬಿನೆಟ್‍ನಲ್ಲಿ ಅನುಮೋದನೆ ಪಡೆಯಲಾಗಿದೆ. ಇದಲ್ಲದೇ ಈ ಭಾಗದ ಗ್ರಾಮೀಣ ರಸ್ತೆಗಳು ಪ್ರವಾಹದಿಂದ ಹಾಗೂ ಮಳೆಯಿಂದಾದ ಹಾನಿಯಾಗಿರುವ ಬಗ್ಗೆ ಅನೇಕ ದೂರು ಬಂದಿದ್ದರಿಂದ ದುರಸ್ಥಿಗೆ ಕ್ರಮಕೈಗೊಳ್ಳಲಾಗುವುದು ಅವರು ತಿಳಿಸಿದರು.

ಯುಕೆಪಿಯ ಯೋಜನೆಗಳಿಂದ ಪುನರ್ ವಸತಿ ಮತ್ತು ಪುನರ್ ನಿರ್ಮಾಣದ ಅಭಿವೃದ್ದಿಗೆ ಇನ್ನಷ್ಟು ಕೆಲಸಗಳು ಆಗಬೇಕಾಗಿದ್ದು, ಇದಕ್ಕಾಗಿ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಚಿಂತನೆ ನಡೆದಿದ್ದು, ಈ ಭಾಗದ ಜನಪ್ರತಿನಿಧಿಗಳು, ತಜ್ಞರ, ಅಧಿಕಾರಿಗಳ ಸಭೆ ನಡೆಸಿ ಅಭಿಪ್ರಾಯ ಪಡೆದು ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿಯೇ ಯುಕೆಪಿ ಬಹುದೊಡ್ಡ ನೀರಾವರಿ ಯೋಜನೆಯಾಗಿದ್ದು, ಈ ಯೋಜನೆಯಡಿ 5.60 ಲಕ್ಷ ಹೆಕ್ಟೇರ್ ನೀರಾವರಿಗೆ ಒಳಪಡಲಿದೆ. ಯುಕೆಪಿ ಎರಡನೇ ಯೋಜನೆಯಲ್ಲಿ ಕೆಲವೊಂದು ವಿಸ್ತ್ರøತ ಯೋಜನೆಗಳನ್ನು ಸೇರಿಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News