ನಿರಪರಾಧಿ ಆಗಿ ಹೊರ ಬರುವೆ: ಮಾಜಿ ಸಚಿವ ವಿನಯ್ ಕುಲಕರ್ಣಿ

Update: 2021-08-21 15:47 GMT
ವಿನಯ್ ಕುಲಕರ್ಣಿ

ಬೆಳಗಾವಿ, ಆ.21: ಗಂಭೀರ ಅಪರಾಧ ಪ್ರಕರಣ ಸಂಬಂಧ ಆರೋಪ ಸ್ಥಾನದಲ್ಲಿರುವ ನಾನು ನಿರಪರಾಧಿಯಾಗಿ ಹೊರ ಬರುತ್ತೇನೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದರು.

ಕೊಲೆ ಆರೋಪ ಪ್ರಕರಣದಲ್ಲಿ ಸಿಬಿಐ ಬಂಧನಕ್ಕೊಳಗಾಗಿ, ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ನ್ಯಾಯಾಂಗದ ಮೇಲೆ ನನಗೆ ಭರವಸೆ ಇದೆ. ನಿರಪರಾಧಿಯಾಗಿ ಹೊರ ಬರುತ್ತೇನೆ. ಜತೆಗೆ, ಕಾನೂನು ಹೋರಾಟವು ಮುಂದುವರೆಯಲಿದೆ ಎಂದರು.

ನನ್ನ ಬದುಕಿನಲ್ಲಿ ಹಲವಾರು ಬದಲಾವಣೆ ಕಂಡುಕೊಂಡಿದ್ದೇನೆ. ಮುಂಬರುವ ದಿನಗಳಲ್ಲಿ ಯಾವ ರೀತಿ ಹೆಜ್ಜೆ ಇಡಬೇಕೆಂದು ಕಲಿತುಕೊಂಡಿದ್ದೇನೆ. ಅಲ್ಲದೆ, ರಾಜಕೀಯ ಜೀವನ ಬೇರೆ, ನನ್ನ ಜೀವನ ಬೇರೆ. ಸಾಮಾನ್ಯ ಜನರು ಕೂಡ ನನ್ನನ್ನು ಪ್ರೀತಿ, ವಿಶ್ವಾಸದಿಂದ ನೋಡುತ್ತಾರೆ ಎಂದು ನುಡಿದರು.

ನಾನು ಇಂದು ನಿನ್ನೆಯಿಂದ ರಾಜಕೀಯ ಮಾಡಿದವನಲ್ಲ. ರೈತ ಕುಟುಂಬದಿಂದ ಬಂದು ವಿದ್ಯಾರ್ಥಿ ಜೀವನದಲ್ಲಿ ನಾಯಕನಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಮುಂದೆ ಕೂಡ ನನ್ನ ಕ್ಷೇತ್ರದ ಜನರಿಗಾಗಿ ಯಾವುದೇ ಸಂದರ್ಭದಲ್ಲೂ ಹೋರಾಟ ಮಾಡುತ್ತೇನೆ ಎಂದ ಅವರು, ನಾನು, ನನ್ನ ಕುಟುಂಬಸ್ಥರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಹಲವಾರು ಸ್ವಾಮೀಜಿಗಳು, ರಾಜಕೀಯದ ಎಲ್ಲ ಮುಖಂಡರು, ನನ್ನ ಕ್ಷೇತ್ರದ ಜನರು, ಅಭಿಮಾನಿಗಳು ಸಾಕಷ್ಟು ಶ್ರಮಿಸಿದ್ದು, ಅವರಿಗೆ ನಾನು ಋಣಿ ಎಂದು ಅವರು ಹೇಳಿದರು.

ಧಾರವಾಡಕ್ಕೆ ಹೋಗುವಂತಿಲ್ಲ: ಕೊಲೆ ಆರೋಪ ಸಂಬಂಧ ಜಾಮೀನಿಗೆ ಷರತ್ತು ವಿಧಿಸಿರುವ ಸುಪ್ರೀಂ ಕೋರ್ಟ್, ಕಾರಾಗೃಹದಿಂದ ಬಿಡುಗಡೆಗೊಂಡ ಬಳಿಕ ವಿನಯ್ ಕುಲಕರ್ಣಿ ಧಾರವಾಡಕ್ಕೆ ಭೇಟಿ ನೀಡುವಂತಿಲ್ಲ ಎಂದು ಉಲ್ಲೇಖಿಸಿದೆ. 

ಏನಿದು ಪ್ರಕರಣ?: 2016ರ ಜೂ.15ರಂದು ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪ ಕೇಳಿಬಂದಿತ್ತು. ಆನಂತರ, ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಅದರಂತೆ ತನಿಖೆ ನಡೆಸಿದ್ದ ಸಿಬಿಐ ಆರೋಪಿ ವಿನಯ ಕುಲಕರ್ಣಿಯನ್ನು ನ.5ರಂದು ವಶಕ್ಕೆ ಪಡೆದಿತ್ತು. ಅಂದಿನಿಂದ ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನದಲ್ಲಿದ್ದರು.

ಹಲವ ವಿರುದ್ಧ ಪ್ರಕರಣ ದಾಖಲು
ಹಿಂಡಲಗಾ ಜೈಲಿನಿಂದ ಜಾಮೀನಿನ ಮೇರೆಗೆ ಬಿಡುಗಡೆಗೊಂಡು ಶನಿವಾರ ಬೆಳಗಾವಿಗೆ ಆಗಮಿಸಿದ ವಿನಯ್ ಕುಲಕರ್ಣಿ ಅವರು ಇಲ್ಲಿನ ಗಣಪತಿ ದೇವಸ್ಥಾನವರೆಗೆ ಮೆರವಣಿಗೆ ನಡೆಸಿದರು. ಈ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ ವಿನಯ್ ಕುಲಕರ್ಣಿ ಸೇರಿ 300 ಜನರ ವಿರುದ್ಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News