ಜೆಡಿಎಸ್ ನಿಂದ ರಾಜ್ಯಾದ್ಯಂತ ಪಾದಯಾತ್ರೆ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ

Update: 2021-08-22 12:52 GMT

ಬೆಂಗಳೂರು, ಆ. 22: `ಮಹದಾಯಿ, ಕೃಷ್ಣಾ ಮೇಲ್ದಂಡೆ ಹಾಗೂ ಮೇಕೆದಾಟು ಯೋಜನೆಗಳನ್ನು ಕರ್ನಾಟಕದ ಪರವಾಗಿ ರೂಪಿಸುವಂತೆ ಒತ್ತಾಯಿಸಿ ಜೆಡಿಎಸ್ ವತಿಯಿಂದ ರಾಜ್ಯದಾದ್ಯಂತ ಪಾದಯಾತ್ರೆ ನಡೆಸಲಾಗುವುದು' ಎಂದು ಮಾಜಿ ಪ್ರಧಾನಿಯೂ ಆದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.

ರವಿವಾರ ನಗರದ ಶೇಷಾದ್ರಿಪುರಂನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, `ನದಿ ಯೋಜನೆಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಈ ನಿಟ್ಟಿನಲ್ಲಿ ಹೋರಾಟ ನಡೆಸಲಿದೆ. ವಿಧಾನಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯದಾದ್ಯಂತ ಪಾದಯಾತ್ರೆ ನಡೆಸಲಾಗುವುದು' ಎಂದು ಹೇಳಿದರು.

ಪಕ್ಷದ ಸ್ಥಳೀಯ ಮುಖಂಡರು ಒಂದೊಂದು ತಂಡವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಸಮಾವೇಶಗಳಲ್ಲಿ ನಾನು ಪಾಲ್ಗೊಳ್ಳುತ್ತೇನೆ.ಅಲ್ಲದೆ, ತಮಗೆಪಾದಯಾತ್ರೆ ಮಾಡಲು ಕಷ್ಟ.ಹಾಗಾಗಿ, ಸಾಂಕೇತಿಕವಾಗಿ ಹೋರಾಟಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.
ರಾಜ್ಯದ ನೀರಾವರಿ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಕೃಷ್ಣ ನದಿ ನೀರು ವಿಚಾರವಾಗಿ ಮಹಾರಾಷ್ಟ್ರದ ನಾಯಕರೊಂದಿಗೆ ಮಾತನಾಡಿರುವುದಾಗಿ ಮುಖ್ಯಮಂತ್ರಿ ಹೇಳಿದ್ದು, ಸಮಸ್ಯೆಗೆ ಪರಿಹಾರ ಸಿಗಲಿ. ಅಲ್ಲದೆ, ಈ ಬಗ್ಗೆ ಸುಪ್ರೀಂಕೋರ್ಟ್?ನಲ್ಲಿ 3 ರಾಜ್ಯಗಳು ಅರ್ಜಿ ಸಲ್ಲಿ ಸಿವೆ. ಆದರೂ, ಎನ್‍ಸಿಪಿ ಶರದ್ ಪವಾರ್, ಜೆಡಿಎಸ್ ಮುಖಂಡರ ಜತೆ ಚರ್ಚಿಸುವೆ ಎಂದು ನುಡಿದರು.

ಅದೇ ರೀತಿ, ಆಲಮಟ್ಟಿ ವಿಚಾರ ಇಂದು ನಿನ್ನೆಯದಲ್ಲ. ಆಲಮಟ್ಟಿಯಿಂದ ಪಾದಯಾತ್ರೆಗೂ ಜೆಡಿಎಸ್? ನಿರ್ಧರಿಸಿದೆ.ಇನ್ನು, ಮೇಕೆದಾಟು ವಿಚಾರವಾಗಿ ಇನ್ನೊಂದು ತಂಡ ಬರಬೇಕು. ರಾಜ್ಯದ 3 ನೀರಾವರಿ ಯೋಜನೆಗಳು ಹೀಗೆಯೇ ಆಗಿದೆ. ಮಹದಾಯಿ ನಮ್ಮಲ್ಲೇ ಶುರುವಾಗಿ ಮಹಾರಾಷ್ಟ್ರದಲ್ಲೂ ಇದೆ. 3 ಯೋಜನೆ ಬಗ್ಗೆ ಸುಮ್ಮನೆ ಇದ್ದರೆ ಆಗಲ್ಲವೆಂದು ನಿರ್ಧಾರ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಯಾರೂ ಯಾರನ್ನೂ ಕಟ್ಟಿಹಾಕುವುದಕ್ಕೆ ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷಗಳು ಅವರವರ ರಾಜ್ಯಗಳಿಗಷ್ಟೇ ಸೀಮಿತವಾಗಿವೆ. ಇನ್ನು, ಕಾಂಗ್ರೆಸ್ಸಿನ ರಾಹುಲ್ ಯುವ ನಾಯಕ, ಅವರ ಬಗ್ಗೆ ಲಘುವಾಗಿ ಮಾತಾಡಲ್ಲ. ಜನರು ಕಷ್ಟದಲ್ಲಿದ್ದಾರೆಂದು ರಾಹುಲ್ ಗಾಂಧಿ ತೋರಿಸಿದರು ಎಂದೂ ದೇವೇಗೌಡ ಹೇಳಿದರು.

ಸಂಸತ್ತು, ಬೇಸರ: ಹೊಸದಿಲ್ಲಿಯಲ್ಲಿ ಈ ಬಾರಿ 27 ದಿನ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಿತು. ಅದರಲ್ಲಿ ಒಂದು ದಿನವೂ ಅಧಿವೇಶನಕ್ಕೆ ಗೈರಾಗಿರಲಿಲ್ಲ. ನನಗೆ ಮಾತನಾಡುವ ಅವಕಾಶ ಸಿಗುತ್ತೆಂದು ಕಾಯುತ್ತಿದ್ದೆ. ದುರಂತ ಅಂದರೆ ಸುಗಮವಾಗಿ ಅಧಿವೇಶನವೇ ನಡೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಒಂದೆಡೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಗಲಾಟೆ ಮಾಡುತ್ತಿದ್ದವು. ಯಾವುದೇ ಚರ್ಚೆ ಮಾಡದೆ ಮಸೂದೆ ಅಂಗೀಕಾರ ಮಾಡಿಕೊಂಡರು. ಒಂದು ಮಸೂದೆ ಅಂಗೀಕಾರ ಸಂಬಂಧ 3 ಗಂಟೆ ಚರ್ಚೆ ಮಾಡಿದರು. ಅದರಲ್ಲಿ ಮಾತ್ರ ನಾನು ಭಾಗಿಯಾದೆ. ಒಂದಷ್ಟು ಸದಸ್ಯರು ಸದನದಲ್ಲಿ ನೃತ್ಯ ಕೂಡ ಮಾಡಿದ್ದರು. ಇತಿಹಾಸದಲ್ಲಿಯೇ ಇಂತಹ ಘಟನೆ ನಾನು ನೋಡಿರಲಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News