ಕೆಪಿಎಸ್ಸಿಯಲ್ಲಿ ಕಾನೂನು ಬಾಹಿರ ಕೃತ್ಯಗಳು ಸಾಮಾನ್ಯವಾಗಿಬಿಟ್ಟಿದೆ: ನ್ಯಾ.ಸಂತೋಷ್ ಹೆಗ್ಡೆ

Update: 2021-08-22 11:33 GMT
ನ್ಯಾ.ಸಂತೋಷ್ ಹೆಗ್ಡೆ 

ಬೆಂಗಳೂರು, ಆ. 22: `ಈಗಿನ ಕೆಪಿಎಸ್‍ಸಿ ಅಧ್ಯಕ್ಷರ ನೇಮಕವು ಮೇಲ್ನೋಟಕ್ಕೆ ಕಾನೂನುಬಾಹಿರವಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಉಲ್ಲಂಘನೆಗಳು ಸಾಮಾನ್ಯವಾಗಿಬಿಟ್ಟಿವೆ' ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ವಿಷಾದಿಸಿದ್ದಾರೆ.  

ರವಿವಾರ `ಕೆಪಿಎಸ್‍ಸಿ ಸ್ವಚ್ಛಗೊಳಿಸಿ-ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಿ' ವೆಬಿನಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, `ಲಂಚ ಕೊಟ್ಟು ನೌಕರಿ ಪಡೆಯುವ ನೌಕರ ತಾನೂ ಲಂಚ ಪಡೆಯುವಂತನಾಗುತ್ತಾನೆ. ಹೀಗಾಗಿ ಲಂಚ ಕೊಟ್ಟು ನೌಕರಿ ಪಡೆಯದೆ, ಅರ್ಹತೆಗನುಸಾರವಾಗಿ ಉದ್ಯೋಗ ಪಡೆಯಲು ಹೋರಾಟ ರೂಪಿಸಿ ಉದ್ಯೋಗ ಪಡೆಯಿರಿ' ಎಂದು ಕಿವಿಮಾತು ಹೇಳಿದ್ದಾರೆ. 

ಎಐಡಿವೈಒ ಅಖಿಲ ಭಾರತ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, `ಸಮಾಜದಲ್ಲಿನ ಭ್ರಷ್ಟಾಚಾರವನ್ನು ಸ್ವಚ್ಛಗೊಳಿಸಲು ಇಂದಿನ ಯುವಸಮುದಾಯ ಮುಂದಾಗಬೇಕು. ಆಗ ಮಾತ್ರ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಸಿಗಲು ಸಾಧ್ಯ. ದೇಶದಲ್ಲಿ ಸುಮಾರು 75 ಕೋಟಿ ಯುವಜನರಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಶೇ.70ರಷ್ಟು ಜನ 15ರಿಂದ 59ರ ವಯೋಮಾನದಲ್ಲಿದ್ದಾರೆ. ದುಡಿಯಲು ಸಮರ್ಥವಾದ ಹೇರಳವಾದ ಮಾನವ ಸಂಪನ್ಮೂಲ ನಮ್ಮಲ್ಲಿದೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳುವ ಇರಾದೆ ನಮ್ಮ ಆಡಳಿತ ವ್ಯವಸ್ಥೆಗಿಲ್ಲ' ಎಂದು ವಿಷಾದಿಸಿದರು.

ಅರ್ಹರನ್ನು ಉದ್ಯೋಗಕ್ಕೆ ಆಯ್ಕೆ ಮಾಡಬೇಕಾದ ಕೆಪಿಎಸ್‍ಸಿಯೇ ಇಂದು ಭ್ರಷ್ಟಾಚಾರದಲ್ಲಿ ಮುಳುಗಿದೆ. ಸರಕಾರದ ಮುಖ್ಯಸ್ಥರೇ ತಮ್ಮ ದಲ್ಲಾಳಿಗಳನ್ನು ಕೆಪಿಎಸ್‍ಸಿಯ ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿ ನೇಮಕ ಮಾಡುತ್ತಿದ್ದಾರೆ. ತನ್ಮೂಲಕ ಉದ್ಯೋಗಾಕಾಂಕ್ಷಿಗಳಿಂದ ಹಣ ದೋಚುವ ದಂಧೆ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸರಕಾರಗಳು ಉದ್ಯೋಗ ಸೃಷ್ಟಿಗಾಗಿ ತಮ್ಮ ಬಜೆಟ್‍ನಲ್ಲಿ ಯಾವುದೇ ಅನುದಾನ ಮೀಸಲಿಡುತ್ತಿಲ್ಲ. ಕೈಗಾರಿಕೀಕರಣದ ಹೆಸರಿನಲ್ಲಿ ರೈತರಿಂದ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಆದg,  ಹೊಸ ಕೈಗಾರಿಕೆಗಳೂ ಬಂದಿಲ್ಲ. ಉದ್ಯೋಗಗಳೂ ಸೃಷ್ಟಿಯಾಗಿಲ್ಲ. ಇವನ್ನು ಪ್ರಶ್ನಿಸಿ ನಾವು ಹೋರಾಟ ಬೆಳೆಸಬೇಕು. ಹೋರಾಟದ ಮೂಲಕವೇ ಹೊಸ ಮೌಲ್ಯಗಳೂ ಹುಟುತ್ತವೆ ಎಂದು ಅವರು ಹೇಳಿದ್ದಾರೆ. 

ಎಐಡಿವೈಓ ರಾಜ್ಯಾಧ್ಯಕ್ಷೆ ಎಂ.ಉಮಾದೇವಿ ಮಾತನಾಡಿ, `ಕೋವಿಡ್ ನಂತರದ ಅವಧಿಯಲ್ಲಂತೂ ನಿರುದ್ಯೋಗ ಭೀಕರ ಸ್ವರೂಪ ತಾಳಿದೆ. ಯುವಕರು ಹತಾಶೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 3ನೇ ಅಲೆಗೆ ಸನ್ನದ್ಧರಾಗಿ ಎಂದು ಹೇಳುವ ಸರಕಾರ ಅದರ ನಿರ್ವಹಣೆಗೆ ಆರೋಗ್ಯ ಇಲಾಖೆಯಲ್ಲಿ ಅವಶ್ಯಕವಿರುವ ಸಿಬ್ಬಂದಿಯನ್ನೂ ನೇಮಕ ಮಾಡುತ್ತಿಲ್ಲ. ನಾವು ಯುವಜನರು ಸುಮ್ಮನೇ ಸರಕಾರಗಳ ಮೇಲೆ ಭರವಸೆಯಿಟ್ಟು ಕೂತರೆ ನಮಗೆ ಉದ್ಯೋಗ ಲಭಿಸುವುದಿಲ್ಲ. ಉದ್ಯೋಗ ನಮ್ಮ ಹಕ್ಕು. ಅದನ್ನು ಪಡೆಯಲು ಮೌಲ್ಯಾಧಾರಿತ ಸಮರಶೀಲ ಹೋರಾಟಕ್ಕೆ ಮುನ್ನುಗ್ಗೋಣವೆಂದು ಕರೆ ನೀಡಿದ್ದಾರೆ.

ನಿರುದ್ಯೋಗಿ ಯುವಜನ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಶರಣಪ್ಪ ಉದ್ಭಾಳ್ ಮಾತನಾಡಿದರು.  ಸಮಿತಿಯ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಕಾರ್ಯಕ್ರಮ ನಡೆಸಿಕೊಟ್ಟರು. ರಾಜ್ಯದಾದ್ಯಂತ ಯುವಜರು ವೆಬಿನಾರ್‍ನಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News