ಮೈಸೂರು-ಬೆಂಗಳೂರು ನಡುವಿನ ದಶಪಥ ರಸ್ತೆ ಯುಪಿಎ ಸರ್ಕಾರದ ಕೊಡುಗೆ: ಪ್ರತಾಪ್ ಸಿಂಹಗೆ ಎಚ್.ವಿಶ್ವನಾಥ್ ತಿರುಗೇಟು

Update: 2021-08-22 12:14 GMT

ಮೈಸೂರು,ಅ.22: ಮೈಸೂರು-ಬೆಂಗಳೂರು ನಡುವಿನ ದಶಪಥ ರಸ್ತೆ ಕಾಮಗಾರಿ ಅಂದಿನ ಯುಪಿಎ ಸರ್ಕಾರದ ಕೊಡುಗೆ ಹೊರತು ಸಂಸದ ಪ್ರತಾಪ್ ಸಿಂಹ ಅವರ ಸಾಧನೆಯಲ್ಲ ಎಂದು ಸ್ವಪಕ್ಷದ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿರುಗೇಟು ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು-ಬೆಂಗಳೂರು ನಡುವಿನ ದಶಪಥ ರಸ್ತೆ ನನ್ನ ಕೊಡುಗೆ ಎಂದು ಸಂಸದ ಪ್ರತಾಪ್ ಸಿಂಹ ಹೇಳುತ್ತಿರುವುದು ಸರಿಯಲ್ಲ, ಮೈಸೂರು-ಬೆಂಗಳೂರು, ಬೆಂಗಳೂರು-ಮಡಿಕೇರಿ, ಮಡಿಕೇರಿ-ಮಂಗಳೂರು ನಡುವಿನ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಅಂದಿನ ಯುಪಿಎ ಸರ್ಕಾರ ಅಪಗ್ರೇಡ್ ಮಾಡಿತು. ಆಗ ಈ ಭಾಗದ ಸಂಸದರಾಗಿದ್ದ ನಾನು, ಆರ್.ಧ್ರುವನಾರಾಯಣ, ರಮ್ಯ, ಡಿ.ಕೆ.ಸುರೇಶ್ ಹತ್ತು ಹಲವು ಸಭೆಗಳನ್ನು ಮಾಡಿದ್ದೆವು ಎಂದು ಹೇಳಿದರು.

ನಂತರ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು, ಆಗ ಸಿದ್ದರಾಮಯ್ಯ, ಅಂದಿನ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸಹ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಹತ್ತು ಹಲವು ಸಭೆಗಳನ್ನು ಮಾಡಿದ್ದರು. ಹಾಗಾಗಿ ಈ ಯೋಜನೆ ಜಾರಿಗೆ ಬರಲು ಸಿದ್ದರಾಮಯ್ಯ ಮತ್ತು ಡಾ.ಎಚ್.ಸಿ.ಮಹದೇವಪ್ಪ ಸಹ ಕಾರಣೀಭೂತರಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದರು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ ಈ ಯೋಜನೆ ಜಾರಿಗೆ ಬಂದಿದೆ. ರಾಜ್ಯದವರೇ ಆದ ಅಂದಿನ ಭೂಸಾರಿಗೆ ಸಚಿವ ಆಸ್ಕರ್ ಫರ್ನಾಂಡೀಸ್ ಅವರು ರಾಜ್ಯದ 1862 ಕೀ.ಮಿ ರಸ್ತೆಗಳನ್ನು ಉನ್ನತೀಕರಣಗೊಳಿಸಿದರು. ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸಾವಿರಾರು ಕೋಟಿಗಳನ್ನು ನೀಡಿದರು. ಆಗಲೇ ಡಿಪಿಆರ್ ಕೂಡ ಆಗಿತ್ತು,  ಸಿದ್ದರಾಮಯ್ಯ ಮುಖ್ಯಮಂತ್ರಿಗಳಾದ ಮೇಲೆ ಭೂಸ್ವಾಧೀನ ಪ್ರಕ್ರಿಯೆ ಎಲ್ಲ ಮುಗಿದು ಕಾಮಗಾರಿಯೂ ಆರಂಭವಾಗಿತ್ತು, 10-12 ವರ್ಷಗಳ ಹಿಂದೆ ಆಗಿರುವ ಯೋಜನೆಗಳನ್ನು ನಾನು ಮಾಡಿದೆ ಎಂದು ಸುಳ್ಳು ಹೇಳಬಾರದು ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದರು.

ಮಿಸ್ಟರ್ ಪ್ರತಾಪ್ ಸಿಂಹ ನೀವು ಮಾಡಿರದ ಕೆಲಸಗಳನ್ನು ನಾನು ಮಾಡಿದ್ದೇನೆ ಎಂದು ಎಷ್ಟು ದಿನ ಜನರಿಗೆ ಸುಳ್ಳುಗಳನ್ನು ಹೇಳುತ್ತೀರಿ, ನೀವು ಸಂಸದರಾದ ಮೇಲೆ ಮೈಸೂರಿಗೆ ಮತ್ತು ಜಿಲ್ಲೆಗೆ ನಿಮ್ಮ ಕೊಡುಗೆ ಏನು? ಕೇಂದ್ರದಿಂದ ಯಾವ ಹೊಸ ಯೋಜನೆ ತಂದಿದ್ದೀರಿ ಎಂದು ಹೇಳಿ, ಅದು ಬಿಟ್ಟು ಸುಳ್ಳುಗಳನ್ನೇ ಏಕೆ ಹೇಳುತ್ತಿದ್ದೀರಿ ಎಂದು ಕಿಡಿಕಾರಿದರು.

ಮೈಸೂರು ಜನರಿಗೆ ಕುಡಿಯುವ ನೀರಿಗಾಗಿ ಉಂಡುವಾಡಿ ಕೆರೆ ಯೋಜನೆ ಜಾರಿಯನ್ನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ನನ್ನ ಕೊಡುಗೆ ಎಂದು ಹೇಳುತ್ತಿದ್ದಾರೆ. ಇದು ನಾನು ಸಂಸದನಾಗಿದ್ದಾಗ ನರ್ಮ್ ಯೋಜನೆಯಲ್ಲಿ ಮೈಸೂರಿನ ಜನತೆಗೆ ನೀರು ಕೊಡುವ ಸಲುವಾಗಿ ಉಂಡುವಾಡಿ, ಮೇಗಳಾಪುರ ಮತ್ತು ಕಬಿನಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಬೇಕಿದ್ದರೆ ದಾಖಲೆಗಳನ್ನು ನೀಡುತ್ತೇನೆ. ಈ ಎಲ್ಲಾ ಯೋಜನೆಗಳು ನಾನು ಸಂಸದನಾಗಿದ್ದ ವೇಳೆಯೇ ಜಾರಿಗೆ ಬಂದಿದ್ದು, ಆದರೆ ಶಾಸಕ ಜಿ.ಟಿ.ದೇವೇಗೌಡ ಮತ್ತು ಸಂಸದ ಪ್ರತಾಪ್ ಸಿಂಹ ನಮ್ಮ ಯೋಜನೆ ಎಂದು ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಹರಿಹಾಯ್ದರು. 

ಜಾತಿಗಳಿಗಿರುವ ಪ್ರಾಧಿಕಾರ ದಸರಾಗೆ ಏಕಿಲ್ಲ: ಜಾತಿಗಳಿಗೆ ಇರುವ ಪ್ರಾಧಿಕಾರ, ದಸರಾ ಮಹೋತ್ಸವ ಆಚರಣೆಗೆ ಯಾಕಿಲ್ಲ ? ಸರ್ಕಾರ ಮೊದಲು ದಸರಾ ಪ್ರಾಧಿಕಾರ ರಚಿಸಬೇಕು. ಅದರೊಟ್ಟಿಗೆ ದಸರಾ ಮಾಡಬೇಕು. ತ್ವರಿತವಾಗಿ ಪ್ರಾಧಿಕಾರ ರಚಿಸಬೇಕು ಎಂದು ಒತ್ತಾಯಿಸಿದರು.

ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಆಚರಣೆಗೆ ಸೂಕ್ತ ಕ್ರಮಕೈಗೊಳ್ಳಬೇಕು. ದಸರಾ ಮಹೋತ್ಸವ ಸರಳ ಹಾಗೂ ಸಾಂಪ್ರದಾಯಿಕವಾಗಿರಬೇಕು ಎಂದು ಹೇಳಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News