ಕೊರೋನ ಕಡಿಮೆಯಾಗಬೇಕಾದರೆ ಮೊದಲು ರಾಜಕಾರಣಿಗಳ ಸಭೆ, ಮೆರವಣಿಗೆಗಳನ್ನು ನಿಲ್ಲಿಸಬೇಕು: ಎಚ್.ವಿಶ್ವನಾಥ್

Update: 2021-08-22 12:28 GMT

ಮೈಸೂರು: ಕೊರೋನಾ ಕಡಿಮೆಯಾಗಬೇಕಾದರೆ ಮೊದಲು ರಾಜಕಾರಣಿಗಳ ಸಭೆ, ಮೆರವಣಿಗೆಗಳನ್ನು ನಿಲ್ಲಿಸಬೇಕು ಆಗ ಮಾತ್ರ  ಕೊರೋನ ಕಡಿಮೆಯಾಗಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸರ್ಕಾರಕ್ಕೆ ಸಲಹೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಲಾಕ್ ಡೌನ್, ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ರಾಜಕಾರಣಿಗಳ ಸಭೆ ಮತ್ತು ಮೆರವಣಿಗೆಗಳಿಗೆ ಅವಕಾಶ ಕೊಟ್ಟರೆ ಕೊರೋನ ಎಲ್ಲಿ ಕಡಿಮೆಯಾಗಲಿದೆ? ಮೊದಲು ರಾಜಕಾರಣಿಗಳ ಸಭೆ, ಮೆರವಣಿಗೆಗಳನ್ನು ನಿಲ್ಲಿಸಬೇಕು, ಜನರನ್ನು ಗುಂಪು ಸೇರಬೇಡಿ ಎಂದು ರಾಜಕಾರಣಿಗಳಾದ ನಾವೇ ಸಭೆ ಸಮಾರಂಂಭ ಮೆರವಣಿಗೆಗಳನ್ನು ಮಾಡಿದರೆ ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲೆಯಲ್ಲಿ ಕೊರೋನ ಕಡಿಮೆಯಾಗಿದ್ದರೂ ವೀಕೆಂಡ್ ಕರ್ಫ್ಯೂ ಜಾರಿಮಾಡಲಾಗಿದೆ. ವಾರಾಂತ್ಯ ಕಫ್ರ್ಯೂ ಜಾರಿ ಮಾಡಿ ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಅನಾನೂಕೂಲ ಉಂಟಾಗಿದೆ. ರಾಜ್ಯದ ಗಡಿ ಭಾಗಗಳಲ್ಲಿ ಬಿಗಿ ಕ್ರಮಕೈಗೊಳ್ಳಬೇಕು, ಗಡಿಗಳನ್ನು ಬಂದ್ ಮಾಡಬೇಕು, ಹೀಗಾಗಿ, ವಾರಾಂತ್ಯ ಕಫ್ರ್ಯೂ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಸೋಮವಾರದಿಂದ ಶಾಲಾ-ಕಾಲೇಜುಗಳು ಆರಂಭವಾಗುತ್ತಿರುವುದು ಸ್ವಾಗತಾರ್ಹ, ಮುನ್ನಚ್ಚರಿಕೆ ಕ್ರಮ ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗಿರಬಾರದು. ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು, ಗ್ರಾಮ ಪಂಚಾಯಿತಿ, ನಗರಪಾಲಿಕೆ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಗಳು ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜವಾಬ್ದಾರಿ ಕೊಡಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News