ತಾಲಿಬಾನಿಗಳು ಅಲ್ಲಿ ಗುಂಡು ಹಾಕುವ ಹಾಗೆ ಇಲ್ಲಿ ಇವರಿಗೆ ಗುಂಡು ಹಾಕಬೇಕು: ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ
ವಿಜಯಪುರ: 'ಪ್ರಧಾನಿ ಮೋದಿಯಿಂದ ನಾವು ಹಿಂದೂಗಳು ಸುರಕ್ಷಿತವಾಗಿದ್ದೇವೆ. ದೇಶದ ಒಳಗಡೆ ಇರುವ ತಾಲಿಬಾನಿಗಳಿಗೆ ಗುಂಡು ಹಾಕಬೇಕಿದೆ. ತಾಲಿಬಾನಿಗಳು ಅಲ್ಲಿ ಗುಂಡು ಹಾಕುವ ಹಾಗೆ ಇಲ್ಲಿ ಇವರಿಗೆ ಗುಂಡು ಹಾಕಬೇಕು. ಗುಂಡು ಹಾಕದಿದ್ದರೆಇವರು ದೇಶಕ್ಕೆ ಪಿಡುಗು ಆಗುತ್ತಾರೆ' ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದ ಸೃಷ್ಟಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, 'ಅಪ್ಘಾನಿಸ್ತಾನದ ವಿಚಾರದಲ್ಲಿ ಮಾತನಾಡದ ಬುದ್ಧಿ ಜೀವಿಗಳು ತಾಲಿಬಾನ್‌ಗೆ ಹುಟ್ಟಿದ್ದಾರೆ. ಬುದ್ಧಿ ಜೀವಿಗಳು ಲದ್ದಿ ತಿಂದಿದ್ದಾರೆ. ಅವರು ತಾಲಿಬಾನಿ ಸಂತಾನ' ಎಂದು ಯತ್ನಾಳ ತೀವ್ರ ವಾಗ್ದಾಳಿ ನಡೆಸಿದ್ದಾರೆ.
'ಅಪ್ಘಾನಿಸ್ತಾನದಿಂದ ಬರುವ ಹಿಂದೂ, ಸಿಖ್, ಬುದ್ಧ ಮತ್ತು ಜೈನರನ್ನು ಬಿಟ್ಟರೆ ಉಳಿದ ಧರ್ಮದವರಿಗೆ ಭಾರತಕ್ಕೆ ಪ್ರವೇಶ ಕೊಡಬಾರದು. ಆದರೂ ಬರುತ್ತೇವೆ ಎಂದರೆ ಹಿಂದೂ, ಬೌದ್ಧ, ಜೈನ ಧರ್ಮ ಸ್ವೀಕರಿಸಿದರೆ ಬರಲು ಒಪ್ಪಿಗೆ ಸೂಚಿಸಬೇಕು' ಎಂದು ಹೇಳಿದರು.
'ಅಫ್ಘಾನಿಸ್ತಾನದ ತಾಲಿಬಾನಿಗಳ ಬಗ್ಗೆ ರಾಹುಲ್ ಗಾಂಧಿ ಯಾಕೆ ಮಾತಾಡುತ್ತಿಲ್ಲ? ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ಏಕೆ ಮಾತನಾಡುತ್ತಿಲ್ಲ? ಮೋದಿ ಪ್ರಧಾನಿಯಾಗಿರದೆ ಇದ್ದಿದ್ದರೆ ಅವರೆಲ್ಲರೂ ತಾಲಿಬಾನಿಗಳನ್ನು ಇಂಪೋರ್ಟ್ ಮಾಡಿಕೊಳ್ಳುತ್ತಿದ್ದರು' ಎಂದು ಕಿಡಿ ಕಾರಿದರು.
'ಪಠಾಣರು ಕಳ್ಳನನ್ ಮಕ್ಕಳು. ಶೂರರು ವೀರರು ಎಂದು ಹೇಳಿಕೊಳ್ಳುತ್ತಿದ್ದ ಪಠಾಣರು ಹೆಂಡರನ್ನು ಬಿಟ್ಟು ಓಡಿ ಬರ್ತಿದ್ದಾರೆ ಎಂದು ಬಾಲಿವುಡ್ ಚಿತ್ರನಟರಾದ ಖಾನ್ ಗಳ ವಿರುದ್ಧ ಹರಿಹಾಯ್ದ ಯತ್ನಾಳ್, ಬಾಲಿವುಡ್‌ನ ಖಾನ್‌ಗಳು ಈಗ ಅಪ್ಘಾನಿಸ್ತಾನಕ್ಕೆ ಹೋಗಲಿ. ಭಾರತ ಸುರಕ್ಷಿತ ಅಲ್ಲ ಎನ್ನುವ ಖಾನ್ ನಟರು ಅಪ್ಘಾನಿಸ್ತಾನಕ್ಕೆ ಹೋಗಿ ಜೀವನ ಮಾಡಲಿ' ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ ಯತ್ನಾಳ್, ರಾಹುಲ್ ಗಾಂಧಿ ಯಾವ ಧರ್ಮದಲ್ಲಿ ಜನಿಸಿದ್ದಾರೆ ಗೊತ್ತಿಲ್ಲ. ಅವನು ಹಿಂದೂನು ಇಲ್ಲ. ಕ್ರಿಶ್ಚಿಯನ್ನೂ ಇಲ್ಲ. ಪ್ರಧಾನಿಗಳು ದೇಶದ ವಿರುದ್ಧ ಮಾತನಾಡುವ ಓವೈಸಿಗಳಂಥವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಯತ್ನಾಳ ವಾಗ್ದಾಳಿ ನಡೆಸಿದರು.
ತಾಲಿಬಾನಿ ಪರ ಜಮಖಂಡಿ ಯುವಕ ಪೋಸ್ಟ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ್, ಮಕ್ಕಳನ್ನು ತಾಲಿಬಾನಿಗಳ ಬಳಿಗೆ ಕಳುಹಿಸಬೇಕು. ನಮ್ಮ ದೇಶದಲ್ಲಿ ಇಟ್ಟುಕೊಳ್ಳಬಾರದು ಎಂದು ಆಗ್ರಹಿಸಿದರು.
ಸ್ವಾಮೀಜಿಗಳ ವಿರುದ್ಧವೂ ಯತ್ನಾಳ್ ವಾಗ್ದಾಳಿ
ಸ್ವಾಮೀಜಿಗಳ ವಿರುದ್ಧವೂ ವಾಗ್ದಾಳಿ ನಡೆಸಿದ ಯತ್ನಾಳ್, ಅಪಘಾನಿಸ್ತಾನದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಯಾರೂ ಮಾತನಾಡುತ್ತಿಲ್ಲ. ನಮ್ಮಲ್ಲಿ ಅಯೋಗ್ಯ ನನ್ಮಕ್ಕಳು ಕೆಲವೊಬ್ಬ ಸ್ವಾಮಿಗಳೂ ಇದ್ದಾರೆ. ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂದು ಪ್ರವಚನದಲ್ಲಿ ಹೇಳುತ್ತಾರೆ.
ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳುತ್ತಾರೆ. ಆದರೆ ಇವತ್ತು ಯಾಕೆ ಮಾತನಾಡಲ್ಲ? ಮೊನ್ನೆ ಯಡಿಯೂರಪ್ಪ ಸಲುವಾಗಿ ಇಷ್ಟೆಲ್ಲಾ ಹೋರಾಟ ಮಾಡಿದವರು. ಇವತ್ತು ತಾಲಿಬಾನ್ ಬಗ್ಗೆ ಮಾತನಾಡುತ್ತಿಲ್ಲ. ದೇಶದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಕೂಡ ತಾಲಿಬಾನ್ ಬೆಳವಣಿಗೆ ಕುರಿತು ಹೇಳಿಕೆ ಕೊಟ್ಟಿಲ್ಲ. ಭಾರತದಲ್ಲಿ ಹೆಣ್ಣು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಓವೈಸಿ ಹೇಳುತ್ತಾನೆ. ಅಫ್ಘನ್ನರು ಇಂದು ಮೂರ್ನಾಲ್ಕು ಮದುವೆಯಾಗಿ ಇವತ್ತು ಹೆಂಡರು ಮಕ್ಕಳನ್ನು ಬಿಟ್ಟು ಓಡಿ ಹೋಗುತ್ತಿದ್ದಾರೆ. ವಿಮಾನದಲ್ಲಿ ಸಿಕ್ಕ ಸಿಕ್ಕ ಕಡೆ ಕುಳಿತು ಓಡಿ ಹೋಗುತ್ತಿರುವ ಇವರು ಗಂಡಸರಾ? ನಿಜವಾದ ಹುಲಿಗಳೆಂದರೆ ನಾವು ಹಿಂದೂಗಳು. ಎಷ್ಟೋ ಮುಸ್ಲಿಮರು ದೇಶ ಆಳಿದರೂ ಹಿಂದೂವಾಗಿ ಉಳಿದಿರೋರೇ ನಿಜವಾದ ಹುಲಿಗಳು ಎಂದು ಅವರು ಹೇಳಿದರು.
'ಡಾ. ಬಿ ಆರ್ ಅಂಬೇಡ್ಕರ್ ಪಾಕಿಸ್ತಾನ ವಿಭಜನೆ ಮಾಡಿದ್ದೇ ತಪ್ಪು ಎಂದು ಹೇಳಿದ್ದರು. ಪಾಕಿಸ್ತಾನದಲ್ಲಿನ ಎಲ್ಲ ಹಿಂದೂಗಳನ್ನು ಭಾರತಕ್ಕೆ ಕರೆಯಿಸಬೇಕು. ಅಲ್ಲದೇ, ಇಲ್ಲಿರುವ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಅಂದಿನ ಪ್ರಧಾನಿ ಜವಾಹರಲಾಲ ನೆಹರೂ ಅವರಿಗೆ ಅಂಬೇಡ್ಕರ್ ಹೇಳಿದ್ದರು. ಆದರೆ, ಅವರು ಕೇಳಲಿಲ್ಲ. ನೆಹರು ದುರಂತದಿಂದ ದೇಶ ಇಂದು ನರಳುತ್ತಿದೆ. ಜಾತ್ಯತೀತ ಎಂಬುದು ನಮ್ಮ ದೇಶದಲ್ಲಿ ದೊಡ್ಡ ರೋಗ' ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.