ಬಾಗಲಕೋಟೆ: ಒಂದೇ ಕುಟುಂಬದ ಮೂವರು ನೀರು ಪಾಲು
ಬಾಗಲಕೋಟೆ, ಆ. 22: ದೇವರ ದರ್ಶನಕ್ಕೆ ಬಂದಿದ್ದ ದಂಪತಿ ಸೇರಿ ಒಂದೇ ಕುಟುಂಬ ಮೂರು ಮಂದಿ ನದಿಯಲ್ಲಿ ಮುಳಗಿ ಸಾವನ್ನಪ್ಪಿದ ದುರ್ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ರವಿವಾರ ನಡೆದಿದೆ.
ಮೃತರನ್ನು ಗುಳೇದಗುಡ್ಡ ತಾಲೂಕಿನ ಕೊಟೇಕಲ್ ಗ್ರಾಮ ಮೂಲದ ಗದಗ ಜಿಲ್ಲೆಯ ರೋಣದಲ್ಲಿ ವಾಸವಾಗಿದ್ದ ವಿಶ್ವನಾಥ್ ಮಾವಿನ ಮರದ(40), ಅವರ ಪತ್ನಿ ಶ್ರೀದೇವಿ (32) ಹಾಗೂ ದಂಪತಿಯ ಪುತ್ರಿ ನಂದಿನಿ (12) ಎಂದು ಗುರುತಿಸಲಾಗಿದೆ.
ವಿಶ್ವನಾಥ್ ದಂಪತಿ ಹಾಗೂ ಪುತ್ರಿ ಸೇರಿ ಮೂರು ಮಂದಿ ಬಾದಾಮಿ ತಾಲೂಕಿನ ಶಿವಯೋಗ ಮಂದಿರದ ಬನಶಂಕರಿ ದೇವಿ ದೇವಸ್ಥಾನಕ್ಕೆ ತೆರಳಿ ದೇವಿ ದರ್ಶನ ಪಡೆದಿದ್ದರು. ನಂತರ ಶಿವಯೋಗ ಮಂದಿರಕ್ಕೆ ತೆರಳಿದ್ದರು. ಅಲ್ಲಿ ಉಪಹಾರ ಸೇವಿಸಲು ಮಲಪ್ರಭಾ ನದಿ ದಡದಲ್ಲಿ ಕುಳಿತಿದ್ದರು. ಊಟ ಮಾಡಿ ಪುತ್ರಿ ನಂದಿನಿ ಮಾವಿನಮರದ ನದಿಯಲ್ಲಿ ಕೈ ತೊಳೆಯಲು ಹೋಗಿ, ಕಾಲು ಜಾರಿ ನದಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಅವರನ್ನ ರಕ್ಷಿಸಲು ತೆರಳಿದ ವಿಶ್ವನಾಥ್ ಹಾಗೂ ಶ್ರೀದೇವಿ ದಂಪತಿ ನೀರಿಗೆ ಇಳಿದಿದ್ದು, ಈಜು ಬಾರದ ಹಿನ್ನೆಲೆಯಲ್ಲಿ ಮೂರು ಮಂದಿ ನೀರು ಪಾಲಾಗಿದ್ದಾರೆ. ಆ ಬಳಿಕ ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಹುಡುಕಾಟ ನಡೆಸಿ ಶ್ರಿದೇವಿ ಅವರ ಶವ ಹೊರಕ್ಕೆ ತೆಗೆಯಲಾಗಿದೆ. ಆದರೆ ವಿಶ್ವನಾಥ್ ಹಾಗೂ ಮಗಳು ನಂದಿನಿ ನೀರಲ್ಲಿ ಕೊಚ್ಚಿ ಹೋಗಿದ್ದು, ಅವರ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಬಾದಾಮಿ ಪಿಎಸ್ಸೈ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸ್ಥಳೀಯ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.