ಈಗಲ್‍ಟನ್ ರೆಸಾರ್ಟ್‍ಗೆ 982 ಕೋಟಿ ರೂ ದಂಡ: ಸರಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್

Update: 2021-08-22 14:45 GMT

ಬೆಂಗಳೂರು, ಆ.22: ಸರಕಾರಿ ಜಮೀನು ಒತ್ತುವರಿ ಮಾಡಿ ಬಿಡದಿ ಬಳಿ ಈಗಲ್‍ಟನ್ ಗಾಲ್ಫ್ ರೆಸಾರ್ಟ್ ನಿರ್ಮಾಣ ಮಾಡಿರುವ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಕಂಪೆನಿಗೆ 982 ಕೋಟಿ ದಂಡ ವಿಧಿಸಿದ್ದ ರಾಜ್ಯ ಸರಕಾರದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. 

ಈಗಲ್ ಟನ್ ರೆಸಾರ್ಟ್ ನಿರ್ಮಾಣಕ್ಕೆ 77 ಎಕರೆ 19 ಗುಂಟೆ ಸರಕಾರಿ ಜಮೀನು ಒತ್ತುವರಿ ಮಾಡಿರುವ ಆರೋಪದಲ್ಲಿ ಸರಕಾರ ನೀಡಿದ್ದ ನೋಟಿಸ್ ಪ್ರಶ್ನಿಸಿ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಕಂಪೆನಿ ಸಲ್ಲಿಸಿದ್ದ ತಕರಾರ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. 

ಅರ್ಜಿದಾರರ ಪರ ವಾದಿಸಿದ ವಕೀಲರು, ಈ ಹಿಂದೆ ರಾಜ್ಯ ಸಚಿವ ಸಂಪುಟವು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ನಿಗದಿ ಮಾಡಿದೆ. ಪ್ರಸ್ತುತ ಮಾರುಕಟ್ಟೆ ದರ 12.25 ಕೋಟಿ ಆಗಿದ್ದು, ಅದನ್ನು ಒಪ್ಪುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.  

ಕಂಪೆನಿಯು ಕಳೆದ 20 ವರ್ಷದಿಂದ ಭೂಮಿಯನ್ನು ಅನುಭವಿಸುತ್ತಿದೆ. ಜತೆಗೆ ದಶಕಗಳ ಕಾಲ ಭೂ ವ್ಯಾಜ್ಯ ಮುಂದುವರಿಸಿಕೊಂಡು ಬಂದಿದೆ. ಇದು ಸರಿಯಾದ ಕ್ರಮ ಅಲ್ಲ. ಅಕ್ರಮ ಮುಚ್ಚಿಕೊಳ್ಳಲು ಈ ವ್ಯಾಜ್ಯವನ್ನು ಕಂಪೆನಿ ಅಸ್ತ್ರವಾಗಿ ಬಳಸಿಕೊಂಡಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಸಾರ್ವಜನಿಕ ಆಸ್ತಿಯನ್ನು ಅಕ್ರಮವಾಗಿ ಸ್ವಾಧೀನ ಮಾಡಿಕೊಂಡು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ದುರುದ್ದೇಶದಿಂದ ಈ ಅರ್ಜಿ ಸಲ್ಲಿಸಲಾಗಿದೆ. ಇದು ಕಾನೂನು ಪ್ರಕ್ರಿಯೆಯ ದುರ್ಬಳಕೆ ಎಂದು ತಿಳಿಸಿದ ಪೀಠ, ಕಂಪೆನಿಯ ಅರ್ಜಿಯನ್ನು ವಜಾಗೊಳಿಸಿತು.

ಪ್ರಕರಣವೇನು: ವಿಶ್ವ ದರ್ಜೆಯ ಗಾಲ್ಫ್ ರೆಸಾರ್ಟ್ ನಿರ್ಮಾಣಕ್ಕೆ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಕಂಪೆನಿ ರಾಮನಗರದ ಬಿಡದಿ ಬಳಿ 1996ರಲ್ಲಿ 400 ಎಕರೆ ಜಮೀನು ಖರೀದಿಸಿತ್ತು. ಸುತ್ತಮುತ್ತಲಿನ 77 ಎಕರೆ ಸರಕಾರಿ ಜಾಗವನ್ನು ಒತ್ತುವರಿ ಮಾಡಿತ್ತು. ಒತ್ತುವರಿ ಮಾಡಿಕೊಂಡಿರುವ ಜಮೀನಿಗೆ 982 ಕೋಟಿ ನಿಗದಿ ಮಾಡಿ ರಾಮನಗರ ಜಿಲ್ಲಾಧಿಕಾರಿ 2017ರಲ್ಲಿ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಕಂಪೆನಿ ಹೈಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News