ಚಿಕ್ಕಮಗಳೂರು: ಜಿ.ಪಂ ಟಿಕೆಟ್‍ಗಾಗಿ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳಿಬ್ಬರ ನಡುವೆ ಮಾರಾಮಾರಿ
ಚಿಕ್ಕಮಗಳೂರು, ಆ.22: ಜಿಲ್ಲಾ ಪಂಚಾಯತಿ ಟಿಕೆಟ್‍ಗಾಗಿ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರುಣಾಮ ಇಬ್ಬರೂ ಆಕಾಂಕ್ಷಿಗಳು ಪರಸ್ಪರ ಬಡಿದಾಡಿಕೊಂಡಿರುವ ಘಟನೆ ನಗರದಲ್ಲಿ ಶನಿವಾರ ರಾತ್ರಿ ವರದಿಯಾಗಿದೆ.
ತಾಲೂಕಿನ ಜಾಗರ ಜಿಲ್ಲಾ ಪಂಚಾಯತ್ ಕ್ಷೇತ್ರ ಸಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಕ್ಷೇತ್ರದಲ್ಲಿ ಚುನಾವಣೆಯ ಕಾವು ಹೆಚ್ಚಾಗ ತೊಡಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಗಳ ನಡುವೆ ಟಿಕೆಟ್‍ಗಾಗಿ ಪೈಪೋಟಿಗಳು ಆರಂಭವಾಗಿದ್ದು, ಈ ಕ್ಷೇತ್ರದಿಂದ ಸ್ಪರ್ಧಿಸಲು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಹಾಗೂ ಇತ್ತೀಚೆಗೆ ಕನ್ನಡ ಸೇನೆಯಿಂದ ಕಾಂಗ್ರೆಸ್ ಪಕ್ಷ ಸೇರಿದ್ದ ಪ್ರವೀಣ್ ಬೆಟ್ಟಗೆರೆ ಮಧ್ಯೆ ಟಿಕೆಟ್‍ಗಾಗಿ ಭಾರೀ ಕಸರತ್ತು ನಡೆಸುತ್ತಿದ್ದರೆಂದು ತಿಳಿದು ಬಂದಿದೆ.
ಈ ವಿಚಾರವಾಗಿ ತೀರ್ಮಾನ ಮಾಡಲು ಕಾಂಗ್ರೆಸ್ ಮುಖಂಡರು ಶನಿವಾರ ಮುಂದಾಗಿದ್ದು, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಇವರಿಬ್ಬರನ್ನು ಕರೆಸಿ ಮನವೊಲಿಸುವ ತಂತ್ರಕ್ಕೆ ಕೈ ಹಾಕಿದ್ದರು. ಶನಿವಾರ ರಾತ್ರಿ ನಗರದ ಪಟಾಕಿ ಮೈದಾನಕ್ಕೆ ಇಬ್ಬರನ್ನೂ ಕರೆಸಿದ್ದರು. ಈ ವೇಳೆ ಇಬ್ಬರು ಆಕಾಂಕ್ಷಿಗಳ ನಡುವೆ ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಈ ವೇಳೆ ಪ್ರಕಾಶ್ ಅವರಿಗೆ ತಲೆಗೆ ಬಲವಾದ ಪೆಟ್ಟಾಗಿದೆ ಎಂದು ತಿಳಿದು ಬಂದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ.
ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ.